“ಬ್ಯಾಂಕ್ ವಹಿವಾಟು, ಡಿಜಿಟಲ್ ಪಾವತಿಗಳ ಮೇಲೆ ನಿಗಾ ವಹಿಸಲು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ”

Estimated read time 1 min read
Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಬೆಳಗಾವಿ :–

ಲೋಕಸಭಾ ಚುನಾವಣೆ: ಬ್ಯಾಂಕ್ ಅಧಿಕಾರಿಗಳ ಸಭೆ

ಬ್ಯಾಂಕ್ ವಹಿವಾಟು, ಡಿಜಿಟಲ್ ಪಾವತಿಗಳ ಮೇಲೆ ನಿಗಾ ವಹಿಸಲು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ

ಬೆಳಗಾವಿ, ಏ.06(ಕರ್ನಾಟಕ ವಾರ್ತೆ): ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಅನುಮಾನಾಸ್ಪದ ಬ್ಯಾಂಕ್ ವಹಿವಾಟು ಮತ್ತು ಡಿಜಿಟಲ್ ಪಾವತಿಗಳ ಮೇಲೆ ನಿಗಾ ವಹಿಸಬೇಕು. ಬೃಹತ್ ಮೊತ್ತದ ವಹಿವಾಟು, ಅನುಮಾನಾಸ್ಪದ ವಹಿವಾಟುಗಳು ಕಂಡುಬಂದಲ್ಲಿ ಕೂಡಲೇ ಮಾಹಿತಿಯನ್ನು ನೀಡಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿದರು.

ನಗರದ ಹಳೆ ಜಿಲ್ಲಾ ಪಂಚಾಯತ್ ಸಭಾ ಭವನದಲ್ಲಿ ಶನಿವಾರ (ಏ.06) ನಡೆದ ಬ್ಯಾಂಕ್ ಅಧಿಕಾರಿಗಳ ಸಭೆಯಲ್ಲಿ ಮಾದರಿ ನೀತಿ ಸಂಹಿತೆ ಅನ್ವಯ ಬ್ಯಾಂಕ್ ವಹಿವಾಟುಗಳ ಮಾರ್ಗಸೂಚಿಗಳ ಕುರಿತು ಅವರು ಮಾಹಿತಿ ನೀಡಿದರು.

ಲೋಕಸಭಾ ಚುನಾವಣೆಯಲ್ಲಿ ಆಮಿಷಗಳ ಮೂಲಕ ಮತದಾರರ ಮೇಲೆ ಪ್ರಭಾವ ಬೀರುವ ಅಕ್ರಮ ಯತ್ನಗಳನ್ನು ತಡೆಗಟ್ಟಲು, ಚುನಾವಣಾ ಆಯೋಗವು ಅನುಮಾನಾಸ್ಪದ ಬ್ಯಾಂಕ್ ವಹಿವಾಟುಗಳು ಮತ್ತು ಡಿಜಿಟಲ್ ಪಾವತಿಗಳನ್ನು ಕಟ್ಟುನಿಟ್ಟಾಗಿ ಗಮನಿಸುತ್ತಿದೆ.

ಜಿಲ್ಲೆಯಲ್ಲಿ ಸದ್ಯಕ್ಕೆ 5 ಬ್ಯಾಂಕ್ ಗಳು ಮಾತ್ರ ಅನುಮಾನಾಸ್ಪದ ವಹಿವಾಟುಗಳ ಮಾಹಿತಿ ಲಭ್ಯವಾಗುತ್ತಿದ್ದು, ಉಳಿದ ಬ್ಯಾಂಕ್ ಗಳಿಂದ ಮಾಹಿತಿ ಬರಬೇಕಿದೆ. ಬ್ಯಾಂಕ್ ಅಧಿಕಾರಿಗಳು ಕೂಡಲೇ ಅಂತಹ ವಹಿವಾಟಿನ ಕುರಿತು ಮಾಹಿತಿ ಸಲ್ಲಿಸಬೇಕು ಎಂದು ಸೂಚಿಸಿದರು.

ಚೆಕ್ ಪೋಸ್ಟ್ ಗಳಲ್ಲಿ ದಾಖಲೆಗಳಿಲ್ಲದೇ 50 ಸಾವಿರ ನಗದು ಸಾಗಾಣಿಕೆಗೆ ಕಂಡು ಬಂದಲ್ಲಿ ಕೂಡಲೇ ವಶಪಡಿಸಿಕೊಂಡು ನಿಯಮಾನುಸಾರ ಕ್ರಮ ಜರುಗಿಸಲಾಗುತ್ತಿದೆ. ಎಲ್ಲ ಚೆಕ್ ಪೋಸ್ಟ್ ಗಳಲ್ಲಿ ಅನಧಿಕೃತ ನಗದು ಸಗಣಿಕೆಯನ್ನು ತಡೆಗಟ್ಟಲು ತೀವ್ರ ನಿಗಾ ವಹಿಸಲಾಗಿದೆ. 100 ಕ್ಕಿಂತ ಅಧಿಕ ಮಹಿಳಾ ಬ್ಯಾಂಕ್ ಖಾತೆದಾರಿಗೆ 500, 1000 ರೂಪಾಯಿಗಳಂತೆ ಹಣ ವರ್ಗಾವಣೆಯಾದಲ್ಲಿ ಅಂತಹ ಖಾತೆಗಳನ್ನು ಫ್ರಿಜ್ ಮಾಡಬೇಕು ಎಂದು ಹೇಳಿದರು.

ಚುನಾವಣಾ ಅಭ್ಯರ್ಥಿಗಳು 95 ಲಕ್ಷ ಚುನಾವಣಾ ಪ್ರಚಾರ ಮಿತಿಯನ್ನು ಹೊಂದಿರುತ್ತಾರೆ. ಯಾವುದೇ ದಾಖಲೆಗಳಿಲ್ಲದೆ 10 ಲಕ್ಷಕ್ಕೂ ಅಧಿಕ ಹಣ ಬ್ಯಾಂಕ್ ಜತೆಗೆ ಜಮೆ ಮಾಡಲು ಅವಕಾಶ ಇರುವುದಿಲ್ಲ. ಅಂತಹ ಖಾತೆದಾರರು ಇದ್ದಲ್ಲಿ ಆದಾಯ ತೆರಿಗೆ ನೋಡಲ್ ಅಧಿಕಾರಿಗಳಿಗೆ ಸೂಕ್ತ ದಾಖಲೆ ಸಲ್ಲಿಸಲು ಸೂಚಿಸಬೇಕು.

ಬೃಹತ್ ಮೊತ್ತದ ವಹಿವಾಟುಗಳಾದಲ್ಲಿ ಆದಾಯ ತೆರಿಗೆ ನೋಡಲ್ ಅಧಿಕಾರಿಗಳಿಗೆ ಕೂಡಲೇ ಸಂಪರ್ಕಿಸಿ ಮಾಹಿತಿ ನೀಡಬೇಕು. ಯುಪಿಐ ಡಿಜಿಟಲ್ ಪಾವತಿ ಮೂಲಕ ಕೂಡ ಬೇರೆಬೇರೆ ನಂಬರ್ ಗಳಿಗೆ ಹಣ ವರ್ಗಾವಣೆ ಯಾಗಿರುವ ಕುರಿತು ಸಹ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಫಲಾನುಭವಿಗಳಿಗೆ ಸಾಲ-ಸೌಲಭ್ಯ ಒದಗಿಸಲು ಸೂಚನೆ:

ಸರ್ಕಾರದ ವಿವಿಧ ಇಲಾಖೆಯ ಯೋಜನೆಗಳ ಮೂಲಕ ಅರ್ಜಿ ಸಲ್ಲಿಸಿದಲ್ಲಿ ಕೂಡಲೇ ಅರ್ಜಿಗಳನ್ನು ವಿಲೇವಾರಿಗೊಳಬೇಕು. ವಿನಾಕಾರಣ ನೆಪವೊಡ್ಡದೇ ಸಾಲ ಸೌಲಭ್ಯ ಅರ್ಜಿಗಳನ್ನು ತಿರಸ್ಕರಿಸುವ ಹಾಗಿಲ್ಲ. ಅಭ್ಯರ್ಥಿಗಳು ಸೂಕ್ತ ದಾಖಲೆಗಳನ್ನು ಸಲ್ಲಿಸಿದಲ್ಲಿ ಕಡ್ಡಾಯವಾಗಿ ಬ್ಯಾಂಕ್ ಅಧಿಕಾರಿಗಳು ಸಾಲ ಒದಗಿಸಬೇಕು ಎಂದು ಹೇಳಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕರು ಹಾಗೂ ಮಾದರಿ ನೀತಿಸಂಹಿತೆ ನೋಡಲ್ ಅಧಿಕಾರಿ ಶಿವನಗೌಡ ಪಾಟೀಲ, ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರಶಾಂತ್ ಕುಲಕರ್ಣಿ, ಕ್ಯಾಶ್ ರಿಲೀಸ್ ಕಮಿಟಿ ಸದಸ್ಯ ಕಾರ್ಯದರ್ಶಿ ಗೌರಿಶಂಕರ ಕಡೆಚೂರು, ಲೋಕಲ್ ಆಡಿಟ್ ಸರ್ಕಲ್ ಜಂಟಿ ನಿರ್ದೇಶಕರಾದ ಶಂಕರಾನಂದ ಬನಶಂಕರಿ ಸೇರಿದಂತೆ ವಿವಿಧ ಬ್ಯಾಂಕ್ ಮುಖ್ಯಸ್ಥರು, ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.



Share with Your friends

You May Also Like

More From Author

+ There are no comments

Add yours