“ಬೇರೆಯವರ ಮಾತುಗಳನ್ನು ಕೇಳಲು ಹೋಗಬೇಡಿ. ತಪ್ಪು ಹೇಳುತ್ತಿದ್ದರೆ ತಂದೆ ತಾಯಿ ಮಾತು ಕೇಳುವುದು ಕೂಡ ತಪ್ಪು” – ನ್ಯಾಯಾಧೀಶ ಎಸ್ ಎಲ್ ಚವ್ಹಾಣ

Share with Your friends

ವರದಿ : ಮಿಯಾಲಾಲ ಕಿಲ್ಲೇದಾರ

ಚಿಕ್ಕೋಡಿ :–

ಬೇರೆಯವರ ಮಾತುಗಳನ್ನು ಕೇಳಲು ಹೋಗಬೇಡಿ. ತಪ್ಪು ಹೇಳುತ್ತಿದ್ದರೆ ತಂದೆ ತಾಯಿ ಮಾತು ಕೇಳುವುದು ಕೂಡ ತಪ್ಪು. ಅದರಲ್ಲೂ ಮಾದಕ ವ್ಯಸನದ ವಿಷಯದಲ್ಲಂತೂ ಯುವ ಜನತೆ ಜಾಗೃತೆಯಿಂದ ಹೆಜ್ಜೆ ಇಡಬೇಕಿದೆ” ಎಂದು ಚಿಕ್ಕೋಡಿಯ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್ ಎಲ್ ಚವ್ಹಾಣ ಹೇಳಿದರು.

ತಾಲ್ಲೂಕಿನ ಕೇರೂರು ಗ್ರಾಮದಲ್ಲಿ ಸರ್ಕಾರಿ ಪ.ಪೂ ಮಹಾವಿದ್ಯಾಲಯ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕ ಕೇರೂರು, ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ ಚಿಕ್ಕೋಡಿ ಇವರ ಸಹಯೋಗದಲ್ಲಿ ಆಯೋಜನೆ ಮಾಡಲಾಗಿದ್ದ “ಮಾದಕ ವ್ಯಸನ ತಡೆಗಟ್ಟುವಿಕೆ ಹಾಗೂ ಸಂಚಾರ ನಿಯಮಗಳ ಉಲ್ಲಂಘನೆ” ಎಂಬ ವಿಷಯ ಕುರಿತ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಸಸಿಗೆ ನೀರು ಎರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.

“ಮಾದಕ ದ್ರವ್ಯ ಮಾರಾಟದ ಬೃಹತ್ ಜಾಲವೇ ದೇಶದ ದೊಡ್ಡ ದೊಡ್ಡ ನಗರಗಳಲ್ಲಿ ವ್ಯಾಪಿಸಿಕೊಂಡಿದ್ದು, ಯುವಕರನ್ನು ಇಂತಹ ಜಾಲದಲ್ಲಿ ಸಿಲುಕಿಸಿ ದೊಡ್ಡ ದೊಡ್ಡ ಕುಳಗಳು ವ್ಯಾಪಾರ ಮಾಡಿ ಹಣ ಮಾಡುತ್ತಾರೆ. ಹಾಗಾಗಿ ಯುವಕರು ಇಂತಹ ಜಾಲಕ್ಕೆ ಮಾರು ಹೋಗದೇ ವಿದ್ಯಾಭ್ಯಾಸದಲ್ಲಿ ತೊಡಗಿಕೊಂಡು ಸಮಾಜದಲ್ಲಿ ಉನ್ನತ ಸ್ಥಾನ ಹೊಂದಬೇಕು. ಅಲ್ಲದೇ, ಸಂಚಾರ ನಿಯಮಗಳನ್ನು ನಿಯಮಿತವಾಗಿ ಪಾಲನೆ ಮಾಡಿದ್ದಲ್ಲಿ ಸಮಾಜಕ್ಕೆ ತಾವು ಮಾದರಿಯಾಗುತ್ತೀರಿ”ಎಂದು ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ, ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ಹರೀಶ ಪಾಟೀಲ ಮಾತನಾಡಿ, “ಮೊಬೈಲ್ ಸೇರಿದಂತೆ ಆಧುನಿಕ ಉಪಕರಣಗಳನ್ನು ಜಾಗೃತೆಯಿಂದ ಬಳಸಿ, ಇಂಟರ್ ನೆಟ್ ನಲ್ಲಿ ತಮ್ಮ ನಡೆಯನ್ನು ಗಮಿಸಿ ಡ್ರಗ್ಸ್ ಮಾರಾಟ ಜಾಲ ತಮಗೆ ಗಾಳ ಹಾಕುವ ಸಾಧ್ಯತೆ ಇರುತ್ತದೆ” ಎಂದರು.

ಚಿಕ್ಕೋಡಿಯ 1ನೇ ಹೆಚ್ಚುವರಿ ದಿವಾಣಿ ನ್ಯಾಯಾಧೀಶ ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಅಶೋಕ ಆರ್ ಹೆಚ್ ಮಾತನಾಡಿ, “ಕಾನೂನು ತಿಳಿದುಕೊಂಡರೆ ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ. ಸಂವಿಧಾನವೇ ಶ್ರೇಷ್ಠ ಕಾನೂನಾಗಿದೆ” ಎಂದು ಹೇಳಿದರು.

ಚಿಕ್ಕೋಡಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕಲ್ಮೇಶ ಕಿವಡ ಮಾತನಾಡಿ, “16 ರಿಂದ 21ನೇ ವಯಸ್ಸಿನಲ್ಲಿ ಯುವ ಜನತೆಯ ಮನಸ್ಸು ಚಂಚಲವಾಗಿರುತ್ತದೆ. ಹಾಗಾಗಿ ಒಳ್ಳೆಯದನ್ನೇ ತಾವು ಆಯ್ಕೆ ಮಾಡಿಕೊಳ್ಳಬೇಕು. ನಕಾರಾತ್ಮದ ಕಡೆಗೆ ಒಲವು ಹೆಚ್ಚಿಗೆ ಹೋಗುತ್ತಿದ್ದರೂ ಅದನ್ನು ತಡೆದು ನಿಲ್ಲಿಸಿ ಉತ್ತಮ ನಾಗರಿಕರಾಗಿ ಉತ್ತಮ ಸಮಾಜ ನಿರ್ಮಾಣ ಮಾಡಬೇಕು” ಎಂದು ಸಲಹೆ ನೀಡಿದರು.

ಕೇರೂರಿನ ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯ ಎಮ್ ಆರ್ ಭಾಗಾಯಿ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ 2ನೇ ಹೆಚ್ಚುವರಿ ದಿವಾಣಿ ನ್ಯಾಯಾಧೀಶ ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ನಾಗೇಶ ಪಾಟೀಲ, ಚಿಕ್ಕೋಡಿ ತಾಲ್ಲೂಕು ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಬಿ ಎನ್ ಪಾಟೀಲ, ಕಾರ್ಯದರ್ಶಿ ಎಸ್ ಆರ್ ವಾಲಿ, ಸಿಡಿಪಿಒ ಶ್ರೀಮತಿ ಭಾರತಿ ಕಾಂಬಳೆ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಎನ್ ಎಸ್ ಎಸ್ ಘಟಕದ ಪ್ರೋ ಶ್ರೀಶೈಲ ಕೋಲಾರ ಸ್ವಾಗತಿಸಿ, ಉಪನ್ಯಾಸಕಿ ಪ್ರೋ ಕವಿತಾ ಮಲಬನ್ನವರ ನಿರೂಪಿಸಿ, ಪ್ರೋ ಎಸ್ ಎನ್ ತೇಲಿ ವಂದಿಸಿದರು.


Share with Your friends

You May Also Like

More From Author

+ There are no comments

Add yours