ನಕಲಿ ಭೂ ದಾಖಲೆ ಸೃಷ್ಟಿಸಿ ಸರ್ಕಾರಕ್ಕೆ 70 ಕೋಟಿ ರೂ. ವಂಚನೆ: 5 ಮಂದಿ ಅರೆಸ್ಟ್

ಸರ್ಕಾರದಿಂದ 70 ಕೋಟಿ ರೂ. ಪರಿಹಾರ ಮೊತ್ತ ಪಡೆಯಲು ನಕಲಿ ದಾಖಲೆ ಸೃಷ್ಟಿಸಿ ವಂಚಿಸಲು ಯತ್ನಿಸಿದ 5 ಮಂದಿಯನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ.

ಕೆಂಗೇರಿ ಸಮೀಪದ ಚಲ್ಲಘಟ್ಟದಲ್ಲಿ 6 ಎಕರೆ ಜಮೀನು ನಮ್ಮದು ಎಂದು ನಕಲಿ ದಾಖಲೆ ಸೃಷ್ಟಿಸಿ ಸರ್ಕಾರದಿಂದ 70 ಕೋಟಿ ರೂ. ಪರಿಹಾರ ಪಡೆಯಲು ಯತ್ನಿಸಿದ್ದ 5 ಮಂದಿಯನ್ನು ಬೆಂಗಳೂರಿನ ಶೇಷಾದ್ರಿಪುರ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಚಲಘಟ್ಟ ನಿವಾಸಿಗಳಾದ ಶ್ರೀನಿವಾಸ್, ನಾಗರಾಜ್, ರವಿಕುಮಾರ್, ಭರತ್ ಮತ್ತು ಸ್ವಾಮಿ ಬಂಧಿತರು. ನಾಗರಾಜ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದರೆ, ಉಳಿದ ನಾಲ್ವರಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಡಿಸಿಪಿ (ಕೇಂದ್ರ) ಎಚ್‌ಟಿ ಶೇಖರ್ ತಿಳಿಸಿದ್ದಾರೆ.

ಚಲ್ಲಘಟ್ಟ ನಿವಾಸಿ ಪುಟ್ಟಮ್ಮ, ಗಂಗಮ್ಮ, ನಾಗರಾಜ್​​, ಲಕ್ಷ್ಮಮ್ಮ, ಶ್ರೀನಿವಾಸ, ಸಂತೋಷ್​​, ರವಿಕುಮಾರ್​, ಭರತ್​​, ಸುನೀತ್​, ಆಶಾ, ಸ್ವಾಮಿ, ಉಮೇಶ್​​​, ಬಿಡಿಎ ಭೂಸ್ವಾಧೀನ ಅಧಿಕಾರಿ, ವಿಶೇಷ ತಹಶೀಲ್ದಾರ್​, ಕಂದಾಯ ಇಲಾಖೆ ಅಧಿಕಾರಿಗಳು, ಬಿಡಿಎ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಬಿಡಿಎ ವಿಚಕ್ಷಣ ದಳದ ಡಿವೈಎಸ್ಪಿ ಮಲ್ಲೇಶ್​​ ನೀಡಿದ ದೂರಿನ ಮೇರೆಗೆ ಶೇಷಾದ್ರಿಪುರ ಠಾಣೆ ಪೊಲೀಸರು ಎಫ್‌ಐಆರ್​ ದಾಖಲಿಸಿದ್ದು, ನೋಟಿಸ್ ಜಾರಿ ಮಾಡಿದ್ದಾರೆ.

ಪ್ರಕರಣ ಬೆಳಕಿಗೆ ಬಂದ ಬಳಿಕ ಕೆಲ ಅಧಿಕಾರಿಗಳು ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಪುಟ್ಟಮ್ಮ, ಗಂಗಮ್ಮ, ಲಕ್ಷ್ಮಮ್ಮ, ಆಶಾ ಮತ್ತು ಬಂಧಿತ 5 ಮಂದಿ ಜಮೀನಿಗೆ ಕಾನೂನುಬದ್ಧ ಮಾಲೀಕರಲ್ಲದಿದ್ದರೂ ನಕಲಿ ದಾಖಲೆ ಸೃಷ್ಟಿಸಿ ಪರಿಹಾರ ಪಡೆಯಲು ಯತ್ನಿಸಿದ್ದರು ಎಂದು ತಿಳಿದುಬಂದಿದೆ.

ಚಲ್ಲಘಟ್ಟ ಸರ್ವೇ ನಂ 13 ಮತ್ತು ಹೊಸ ಸರ್ವೇ ನಂಬರ್​ 58ರಲ್ಲಿನ 6 ಎಕರೆ ಜಮೀನಿನ ನಕಲಿ ದಾಖಲೆ ಸೃಷ್ಟಿಸಿರುವ ಆರೋಪಿಗಳು 1976ರಲ್ಲಿ ನಿಧನರಾಗಿರುವ ಅಧಿಕೃತ ಮಾಲೀಕ ಮೂಡ್ಲಪ್ಪಗೆ ಯಾವುದೇ ರೀತಿಯಲ್ಲಿ ಸಂಬಂಧಿಗಳಲ್ಲದೇ ಇದ್ದರೂ ನಾವು ಸಂಬಂಧಿಕರು ಪರಿಹಾರ ಮೊತ್ತದಲ್ಲಿ ನಮಗೂ ಹಕ್ಕಿದೆ ಎಂದು ಅರ್ಜಿ ಸಲ್ಲಿಸಿದ್ದರು.

ಜಮೀನು ರೆವೆನ್ಯೂ ನಿವೇಶನವಾಗಿ ಮಾರ್ಪಾಡಾಗಿ ಆಶ್ರಯ ಯೋಜನೆಗೆ ಕಾಯ್ದಿರಿಸಿರುವ ಜಮೀನಾಗಿದ್ದರೂ ರವಿಪ್ರಕಾಶ್‌ ಮತ್ತು ಸುಧಾ ಅವರು ಭೂ ಪರಿಹಾರಕ್ಕೆ ಅರ್ಹವಾಗಿರುವ ಜಮೀನು ಎಂದು ಸುಳ್ಳು ನಕಾಶೆ ಸಿದ್ಧಪಡಿಸಿದ್ದರು. ಆರೋಪಿಗಳು ಸಲ್ಲಿಸಿದ್ದ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸದೆ, ನಿಜವಾದ ಆಸ್ತಿ ಮಾಲೀಕರ ಬಗ್ಗೆ ವಿಚಾರ ಮಾಡಿರಲಿಲ್ಲ. ದಕ್ಷಿಣ ಉಪ ವಿಭಾಗಾಧಿಕಾರಿ ಡಾ.ಶಿವಣ್ಣ ಅವರು 2021ರಲ್ಲಿಆರೋಪಿ ಪುಟ್ಟಮ್ಮ ಹೆಸರಿಗೆ ಖಾತೆ ಮಾಡಲು ಬೆಂಗಳೂರು ದಕ್ಷಿಣ ತಾಲೂಕು ವಿಶೇಷ ತಹಶೀಲ್ದಾರ್‌ಗೆ ಆದೇಶ ಮಾಡಿ ವಂಚನೆ ಕೃತ್ಯದಲ್ಲಿ ಭಾಗಿಯಾಗಿದ್ದರು.

ಗೋವಿಂದರಾಜು ಎಂಬುವವರು ಬಿಡಿಎಗೆ ನೀಡಿದ ದೂರು ಆಧರಿಸಿ ಪ್ರಾಥಮಿಕ ವಿಚಾರಣೆ ನಡೆಸಿದಾಗ ಹಾಗೂ ಬೆರಳಚ್ಚು ತಜ್ಞರಿಂದ ವರದಿ ಪರಿಶೀಲಿಸಿದಾಗ ಅಕ್ರಮ ಬಯಲಾಗಿದೆ ಎಂದು ತಿಳಿದುಬಂದಿದೆ.

Share this post:

Leave a Reply

Your email address will not be published. Required fields are marked *