ಈವೆಂಟ್ ಮ್ಯಾನೇಜ್ಮೆಂಟ್ ಹೆಸರಲ್ಲಿ ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ ದಂಪತಿ ಅರೆಸ್ಟ್: ನಾಲ್ವರು ಯುವತಿಯರ ರಕ್ಷಣೆ!

ಈವೆಂಟ್ ಮ್ಯಾನೇಜ್ ಮೆಂಟ್ ಹೆಸರಲ್ಲಿ ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ ದಂಪತಿಯನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದು, ನಾಲ್ವರು ಯುವತಿಯರನ್ನು ರಕ್ಷಿಸಿದ್ದಾರೆ.

ಬೆಂಗಳೂರಿನ ಪಟ್ಟೆಗಾರಪಾಳ್ಯ ನಿವಾಸಿ ಪ್ರಕಾಶ್ ಹಾಗೂ ಪತಿ ಪಾರಿಜಾತ ಬಂಧಿತ ದಂಪತಿ.

ರಾಕೇಶ್ ಮತ್ತು ಪೂಜಾ ಎಂದು ಹೆಸರು ಬದಲಿಸಿಕೊಂಡಿದ್ದ ಆರೋಪಿಗಳು ಉದ್ಯೋಗ ಕೊಡಿಸುವ ನೆಪದಲ್ಲಿ ಬಡ ಹೆಣ್ಣುಮಕ್ಕಳನ್ನ ವೇಶ್ಯಾವಾಟಿಕೆ ಅಡ್ಡೆಗೆ ತಳ್ಳುತ್ತಿದ್ದರು.

ಉತ್ತರ ಕರ್ನಾಟಕ ಮೂಲದ ಬಡ ಹೆಣ್ಣು ಮಕ್ಕಳನ್ನ ಬೆಂಗಳೂರಿಗೆ ಕರೆತಂದು ಕೆಲಸ ಕೊಡಿಸದೇ ಹಣದ ಆಮಿಷ ತೋರಿಸುತ್ತಿದ್ದರು. ಕರ್ನಾಟಕದ ಯುವತಿಯರನ್ನು ತಮಿಳುನಾಡು, ಪುದುಚೇರಿ ರೆಸಾರ್ಟ್ ಗಳಿಗೆ ಕಳುಹಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಹೊರ ರಾಜ್ಯದ ಶ್ರೀಮಂತರು ಉದ್ಯಮಿಗಳಿಗೆ ಯುವತಿಯನ್ನು ಪೂರೈಸುತ್ತಿದ್ದ ದಂಪತಿ, ಪ್ರತಿ ವಾರಕ್ಕೊಮ್ಮೆ ಮದುವೆ ಈವೆಂಟ್ ಮ್ಯಾನೇಜ್ ಮೆಂಟ್ ಹೆಸರಿನಲ್ಲಿ ಬೆಂಗಳೂರಿನಿಂದ ತಮಿಳುನಾಡು ಪುದುಚೇರಿಗೆ ಕರೆದೊಯ್ಯುತ್ತಿದ್ದರು.

ಐಷಾರಾಮಿ ರೆಸಾರ್ಟ್ಸ್ ಗಳಲ್ಲಿ ಪಾರ್ಟಿ ಆಯೋಜಿಸುತ್ತಿದ್ದ ದಂಪತಿ ಪಾರ್ಟಿಗೆ ಬರುವ ಒಬ್ಬರಿಗೆ ತಲಾ 25 ಸಾವಿರದಿಂದ 50 ಸಾವಿರ ರೂ.ವರೆಗೂ ಪಡೆಯುತ್ತಿದ್ದರು. ಬೆಂಗಳೂರಿನಿಂದ ಯುವತಿಯರನ್ನು ಕರೆದೊಯ್ಯುವ ಖಚಿತ ಮಾಹಿತಿ ಮೇರೆಗೆ ಸಿಸಿಬಿ ದಾಳಿ ಮಾಡಿ ನಾಲ್ವರು ಯುವತಿಯರನ್ನ ರಕ್ಷಿಸಿದ್ದಾರೆ.

ಬೆಂಗಳೂರಿನ ಗೋವಿಂದರಾಜ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this post:

Leave a Reply

Your email address will not be published. Required fields are marked *