ಕೆಂಗೇರಿ ಕೆರೆಪಾಲಾಗಿದ್ದ ಅಣ್ಣ-ತಂಗಿ ಶವ ಪತ್ತೆ: ಪೌರಕಾರ್ಮಿಕ ತಾಯಿಯ ಆಕ್ರಂದನ!

ಕೆಂಗೇರಿ ಕೆರೆಯಲ್ಲಿ ಆಡಲು ಹೋಗಿ ಮುಳುಗಿದ್ದ ಅಣ್ಣ-ತಂಗಿಯ ಶವವನ್ನು ಮಂಗಳವಾರ ಸಂಜೆ ಹೊರತೆಗೆಯಲಾಗಿದ್ದು, ಬಿಬಿಎಂಪಿಯಲ್ಲಿ ಪೌರಕಾರ್ಮಿಕರಾಗಿರುವ ತಾಯಿಯ ಆಕ್ರಂದನ ಮುಗಿಲುಮುಟ್ಟಿದೆ.

ಸೋಮವಾರ ಸಂಜೆ 6 ಗಂಟೆ ಸುಮಾರಿಗೆ ಅಣ್ಣ ಶ್ರೀನಿವಾಸ್ (13) ತಂಗಿ ಮಹಾಲಕ್ಷ್ಮೀ (11) ಕೆರೆಗೆ ನೀರಲು ಹೋಗಿದ್ದರು. ಈ ವೇಳೆ ಕೆರೆಯ ಬಳಿ ಆಟವಾಡುತ್ತಿದ್ದಾಗ ಆಯತಪ್ಪಿ ಕೆರೆಗೆ ಬಿದ್ದು ಇಬ್ಬರು ಮೃತಪಟ್ಟಿದ್ದರು.

ಭಾರೀ ಮಳೆಯಿಂದಾಗಿ ತುಂಬಿ ಹರಿಯತ್ತಿದ್ದ ಕೆರೆ ಬಳಿ ಹೋಗಿದ್ದ ಅಣ್ಣ-ತಂಗಿ ನಾಪತ್ತೆಯಾಗಿರುವ ಸುದ್ದಿ ತಿಳಿದ ಕೂಡಲೇ ಪೊಲೀಸರು ಹಾಗೂ ಅಗ್ನಿಶಾಮಕದ ದಳದ ಸಿಬ್ಬಂದಿ ರಬ್ಬರ್ ಬೋಟ್ ನೊಂದಿಗೆ ಶೋಧ ಕಾರ್ಯ ನಡೆಸಿತ್ತು.

ಭಾರೀ ಮಳೆ ಮತ್ತು ಕತ್ತಲು ಕವಿದ ಕಾರಣ ಶೋಧ ಕಾರ್ಯ ಮುಂದೂಡಲಾಗಿದ್ದು, ಇಡೀ ದಿನ ಶೋಧ ನಡೆಸಿದ ನಂತರ ಇಬ್ಬರ ಶವ ಪತ್ತೆಯಾಗಿದೆ.

ಕೆಂಗೇರಿ ಕೆರೆ ಪಕ್ಕದ ಬಡಾವಣೆಯಲ್ಲಿ ವಾಸವಾಗಿರುವ ನಾಗಮ್ಮ ಸೋದರಿ ಧನಲಕ್ಷ್ಮೀ ಜೊತೆ ವಾಸವಾಗಿದ್ದು, ಬಿಬಿಎಂಪಿಯಲ್ಲಿ ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಕೆರೆಯ ದಂಡೆ ಮೇಲೆ ಮಕ್ಕಳ ಬಟ್ಟೆ ಮತ್ತು ಬಿಂದಿಗೆ ಪತ್ತೆಯಾಗಿತ್ತು. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಪೋಲಿಸರು ದೌಡಾಯಿಸಿದ್ದು, ಶೋಧಕಾರ್ಯ ನಡೆಸಿದ್ದರು.

ಜ್ಞಾನಭಾರತಿ ಅಗ್ನಿಶಾಮಕದಳ ಸಿಬ್ಬಂದಿ ಹಾಗೂ ಕೆಂಗೇರಿ ಪೊಲೀಸ್ ಸಿಬ್ಬಂದಿ, ಸಿವಿಲ್ ಡಿಫೆನ್ಸ್​ ಸೇರಿದಂತೆ ಸುಮಾರು 15 ಜನರ ತಂಡ ಶೋಧ ಕಾರ್ಯ ನಡೆಸಿ ಎರಡು ಮೃತದೇಹಗಳನ್ನು ಪತ್ತೆ ಮಾಡಿದೆ.

Share this post:

Leave a Reply

Your email address will not be published. Required fields are marked *