“ಹಿಂದುಳಿದ ವರ್ಗಗಳಿಗೆ ಶೇ. 50ರಷ್ಟು ಮೀಸಲಾತಿ ನೀಡಿದ್ದು ಛತ್ರಪತಿ ಶಾಹು ಮಹಾರಾಜರು” :ಮಾಜಿ ಸಚಿವ ಸಂತೋಷ ಲಾಡ್

ಚಿಕ್ಕೋಡಿ :–

ಭಾರತೀಯ ಜನತಾ ಪಕ್ಷ ಹಾಗೂ ಕಾಂಗ್ರೆಸ್ ಪಕ್ಷದಿಂದ ಮಾತ್ರ ಭಾರತ ದೇಶವಲ್ಲ. ಭಾರತೀಯರ ಭಾವನೆಗಳಿಗೂ ಇಲ್ಲಿ ಬೆಲೆ ಸಿಗಬೇಕಿದೆ. ಶೋಷಿತ ವರ್ಗಗಳಿಗೂ ಇಲ್ಲಿ ಮೌಲ್ಯಗಳು ಬಂದಿದ್ದು ಛತ್ರಪತಿ ಶಿವಾಜಿ ಮಹಾರಾಜ, ಬುದ್ಧ, ಬಸವಣ್ಣ ಹಾಗೂ ಅಂಬೇಡ್ಕರ್ ಅವರಂತಹ ವಿಚಾರಗಳಿಂದ ಎಂಬುವುದನ್ನು ಅರಿತುಕೊಳ್ಳಬೇಕು” ಎಂದು ಮಾಜಿ ಸಚಿವ ಸಂತೋಷ ಲಾಡ್ ಹೇಳಿದರು.

ತಾಲ್ಲೂಕಿನ ಇಂಗಳಿ ಗ್ರಾಮದಲ್ಲಿ ₹ 36 ಲಕ್ಷ ಮೊತ್ತದಲ್ಲಿ ತಲೆ ಎತ್ತಿನಿಂತ ಛತ್ರಪತಿ ಶಿವಾಜಿ ಮಹಾರಾಜರ ಬೃಹತ್ ಅಶ್ವಾರೂಢ ಮೂರ್ತಿಯನ್ನು ಭಾನುವಾರ ಅನಾವರಣಗೊಳಿಸಿ ಮಾತನಾಡುತ್ತಾ, “ಹಿಂದುಳಿದ ವರ್ಗಗಳಿಗೆ ಶೇ. 50ರಷ್ಟು ಮೀಸಲಾತಿ ನೀಡಿದ್ದು ಛತ್ರಪತಿ ಶಾಹು ಮಹಾರಾಜರು, ಮಹಿಳೆಯರಿಗೆ ಗೌರವ ನೀಡುವ ನಿಟ್ಟಿನಲ್ಲಿ ಪುತ್ರ ಶಿವಾಜಿಯನ್ನು ಬೆಳೆಸಿದ್ದು ರಾಜಮಾತೆ ಜೀಜಾಮಾತೆಯಂತಹ ತಾಯಿ. ಮರಾಠಾ ಸಮಾಜ ದೇಶಕ್ಕೆ ಅಮೋಘ ಕೊಡುಗೆ ನೀಡಿದೆ. ಮರಾಠಾ ಸಮಾಜ ಬಾಂಧವರು ತಾವು ಬೆಳೆಯುವದರೊಂದಿಗೆ ಇತರೆ ಜಾತಿ ಜನಾಂಗದವರಿಗೆ ಸಹಾಯ ಮಾಡಬೇಕು” ಎಂದರು.

ಚಿಕ್ಕೋಡಿ-ಸದಲಗಾ ಶಾಸಕ ಗಣೇಶ ಹುಕ್ಕೇರಿ ಮಾತನಾಡಿ, “ಮರಾಠಾ ಸಮಾಜ ಬಾಂಧವರ ಏಳ್ಗೆಗಾಗಿ ತನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಇಂಗಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕೆಲಸ ನಿರ್ವಹಿಸಿದ್ದೇನೆ. ಛತ್ರಪತಿ ಶಿವಾಜಿ ಮಹಾರಾಜರ ಆದರ್ಶವನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕ್ಷೇತ್ರ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿದ್ದು, ಇನ್ನಷ್ಟು ಕಾರ್ಯನಿರ್ವಹಿಸುವ ಜವಾಬ್ದಾರಿ ತನ್ನದಾಗಿದೆ” ಎಂದು ಹೇಳಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, “ಛತ್ರಪತಿ ಶಿವಾಜಿ ಮಹಾರಾಜರು ಭಾರತೀಯರಿಗೆ ಮಾತ್ರ ಆದರ್ಶರಲ್ಲ. ವಿಯಟ್ನಾಂನಂತಹ ದೇಶಗಳು ಗೆರಿಲ್ಲಾ ಯುದ್ಧ ಮಾದರಿಯನ್ನು ಅನುಕರಿಸಿ ಯಶಸ್ವಿಯಾಗಿವೆ. ವಿಯೆಟ್ನಾಂ ದೇಶದಲ್ಲಿ ಶಿವಾಜಿ ಮಹಾರಾಜರಿಗೆ ವಿಶೇಷ ಸ್ಥಾನ ನೀಡಲಾಗಿದೆ” ಎಂದರು.

ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಮಾತನಾಡಿ, ಕರ್ನಾಟಕ-ಮಹಾರಾಷ್ಟ್ರದ ಗಡಿಗಿಂತ ದೇಶ ಮೊದಲು ಎಂಬ ಭಾವನೆ ಗಡಿ ಭಾಗದ ಜನರಲ್ಲಿ ಮೂಡಬೇಕು. ಮಹಿಳೆಯರು, ಹಿಂದುಳಿದ ವರ್ಗದ ಜನರನ್ನು ಗೌರವಿಸಿದ ಶಿವಾಜಿ ಮಹಾರಾಜರು ನಮಗೆಲ್ಲರಿಗೂ ಆದರ್ಶವಾಗಿದ್ದಾರೆ” ಎಂದು ಹೆಮ್ಮೆಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ ಮಾತನಾಡಿ, “ಇಂಗಳಿ ಗ್ರಾಮದಲ್ಲಿ ಮರಾಠಾ ಸಮುದಾಯ ಬಾಂಧವರ ಅಭಿವೃದ್ಧಿ ಕಾರ್ಯಗಳಿಗೆ ₹ 3 ಕೋಟಿ ವೆಚ್ಚ ಮಾಡಲಾಗಿದೆ. ಸರ್ಕಾರದಿಂದ ಅನುದಾನ ತಂದು ಕೃಷ್ಣಾ ನದಿ ತೀರದ ಇಂಗಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿಯ ಸಹಸ್ರಾರು ಎಕರೆ ಸವಳು ಜವಳು ಜಮೀನನ್ನು ಫಲವತ್ತತೆ ಮಾಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗಿದೆ” ಎಂದರು.

ಯಡೂರಿನ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಬೆಂಗಳೂರಿನ ಗೋಸಾವಿ ಮಹಾಸಂಸ್ಥಾನ ಮಠದ ಮಂಜುನಾಥ ಸ್ವಾಮೀಜಿ ಸಾನ್ನಿದ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಎಲ್‍ಇ ಸಂಸ್ಥೆಯ ಗೌರವಾಧ್ಯಕ್ಷ ಪ್ರಭಾಕರ ಕೋರೆ, ಮಾಜಿ ಸಚಿವ ಶ್ರೀಮಂತ ಪಾಟೀಲ, ಅಜೀತಸಿಂಹ ನಿಂಬಾಳಕರದೇಸಾಯಿ, ಸುಪ್ರಿಯಾ ಪಾಟೀಲ, ಬಿ ಆರ್ ಯಾದವ, ಅನಿಲ ಪಾಟೀಲ, ರಾಮಾ ಮನೆ, ಬಾಳಸಾಹೇಬ ಪಾಟೀಲ, ರಾಹುಲ ಘಾಟಗೆ, ಮೋಹನ ಜಾಧವ, ರಾಜು ಪವಾರವಡ್ಡರ, ರಣಜೀತ ಶಿರಶೇಟ, ರಾಜು ಮಾನೆ, ಶಂಕರ ಪವಾರ, ಅಣ್ಣಾಸಾಹೇಬ ಶಿಂಧೆ ಇತರರು ಇದ್ದರು.

.

Share this post:

Leave a Reply

Your email address will not be published. Required fields are marked *

You cannot copy content of this page