ಮಂಗಳೂರು :–
ವಕ್ಫ್ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಕರ್ನಾಟಕ ಉಲಮಾ ಒಕ್ಕೂಟದ ನೇತೃತ್ವದಲ್ಲಿ ಅಡ್ಯಾರ್ ಕಣ್ಣೂ ರಿನ ಶಾ ಗಾರ್ಡನ್‌ನಲ್ಲಿ ಎ.18ರಂದು ಪ್ರತಿಭಟನಾ ಸಮಾವೇಶ ನಡೆಯಲಿದೆ.
ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ದ.ಕ ಮತ್ತು ಉಡುಪಿ ಜಿಲ್ಲಾ ಖಾಝಿಗಳ ನೇತೃತ್ವದಲ್ಲಿ ಸಮಾವೇಶ ನಡೆಯಲಿದೆ.

ಮಧ್ಯಾಹ್ನ 3 ಕ್ಕೆ ಕಣ್ಣೂರು ದರ್ಗಾ ಝಿಯಾರತ್ ನಡೆಯಲಿದೆ. ಸಂಜೆ 4ಕ್ಕೆ ಸಭಾ ಕಾರ್ಯ ಕ್ರಮ ನಡೆಯಲಿದೆ.
ಬೈಕ್ ರ್ಯಾಲಿ, ಯಾವುದೇ ಸಂಘಟನೆಯ ಅಥವಾ ಹಸಿರು ಬಾವುಟ, ಘೋಷಣೆಗಳಿಗೆ ನಿಷೇಧವಿದೆ. ಪ್ರಚೋದನಕಾರಿ ಭಾಷಣಗಳಿಗೆ ಅವಕಾಶ ಇಲ್ಲ ಎಂದರು.
ಡಾ|ಎಂ.ಎಸ್.ಎಂ. ಝೈನಿ ಕಾಮಿಲ್ ಮಾತನಾಡಿ, ಭಾರತದ ರಾಷ್ಟ್ರಧ್ವಜ ಕಟ್ಟಿಕೊಂಡು ಬರುವ ವಾಹನಗಳಿಗೆ ಪ್ರವೇಶವಿದೆ. ಸಮಾವೇಶಕ್ಕೆ ಬರಲು ಪಂಪ್‌ವೆಲ್ ಮತ್ತು ಬಿ.ಸಿ.ರೋಡ್‌ನಿಂದ ವಾಹನದ ವ್ಯವಸ್ಥೆ ಮಾಡಲಾಗಿದೆ ಎಂದರು.
ಯು.ಕೆ. ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಮಾತನಾಡಿ, ವಕ್ಫ್ ಬಗ್ಗೆ ಜನರಲ್ಲಿ ತಪ್ಪುಭಾವನೆ ಮೂಡಿಸುವ ಪ್ರಯತ್ನ ನಡೆದಿದ್ದು, ಅದನ್ನು ಹೋಗಲಾಡಿಸಲು ಪ್ರಯತ್ನಿಸಲಾಗುವು ದು ಎಂದರು. ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ, ಖಾಸಿಂ ದಾರಿಮಿ ಕಿನ್ಯ ಮತ್ತಿತರರಿದ್ದರು.
ಪ್ರತಿಭಟನ ಸಮಾವೇಶ; ಪೊಲೀಸರಿಂದ ಹಲವೆಡೆ ಬಿಗು ಭದ್ರತೆ
ಪ್ರತಿಭಟನಾ ಸಮಾವೇಶದ ಹಿನ್ನೆಲೆಯಲ್ಲಿ ಪೊಲೀಸ್ ಬಿಗು ಭದ್ರತೆ ಕೈಗೊಳ್ಳಲಾಗಿದೆ. ಗುರುವಾರ ಸಂಜೆಯಿಂದಲೇ ಸಮಾವೇಶ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಸುರತ್ಕಲ್‌ನಲ್ಲೂ ಬಿಗು ಭದ್ರತೆ ಕೈಗೊಳ್ಳಲಾಗಿದೆ.