“ಯಾವ ಜಾತಿಗೂ ಅನ್ಯಾಯ ಆಗಬಾರದು ಎಂಬುದು ನಮ್ಮ ಉದ್ದೇಶ” ಜಾತಿ ಗಣತಿ ವರದಿ ಸಂಬಂಧ ಸಂಪುಟ ಸಭೆಯಲ್ಲಿ ಯಾರೂ ವಿರೋಧ ಮಾಡಿಲ್ಲ : ಸಿಎಂ ಸಿದ್ದರಾಮಯ್ಯ

ಬೆಳಗಾವಿ :–

“ಜಾತಿ ಗಣತಿ ವರದಿ ಜಾರಿಗೆ ತರುವ ಬಗ್ಗೆ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದರು. ಬಿಜೆಪಿ ನಾಯಕರ ಆರೋಪಕ್ಕೆ ತಿರುಗೇಟು ನೀಡಿದರು.”

ಸಂವಿಧಾನ ಜಾರಿಯಾಗಿ 75 ವರ್ಷ ಆಯ್ತು. ಆದರೂ ಬಡವರು ಬಡವರಾಗಿಯೇ ಉಳಿಯಬೇಕಾ? ಎಲ್ಲರಿಗೂ ಸಮಾನತೆ ಬರಬೇಕು. ಇನ್ನೂ ಜಾತಿಗೆ ಅಂಟಿಕೊಂಡೇ ಇರಬೇಕಾ? ಮುಸ್ಲಿಮರು, ಹಿಂದುಳಿದವರು ಸೇರಿ ಎಲ್ಲ ಜಾತಿಯವರಿಗೆ ಶಿಕ್ಷಣ ಸಿಗಬೇಕಾ, ಬೇಡವಾ? ಅವರಿಗೆ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಶಕ್ತಿ ತುಂಬಬೇಕೋ? ಬೇಡವೋ?” ಎಂದು ಪ್ರಶ್ನಿಸುವ ಮೂಲಕ ಜಾತಿ ಗಣತಿ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡರು.

ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ”ಯಾವ ಜಾತಿಗೂ ಅನ್ಯಾಯ ಆಗಬಾರದು ಎಂಬುದು ನಮ್ಮ ಉದ್ದೇಶ. ಲಿಂಗಾಯತ, ಬ್ರಾಹ್ಮಣ, ಒಕ್ಕಲಿಗ, ಜೈನರು ಸೇರಿ ಯಾರಿಗೂ ಅನ್ಯಾಯ ಆಗಬಾರದು. ಹಾಗಾಗಿ, ಇದು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ” ಎಂದು ಹೇಳಿದರು.

ಜಾತಿ ಗಣತಿ ವರದಿ ಜಾರಿ ವಿಚಾರಕ್ಕೆ ರಾಹುಲ್ ಗಾಂಧಿ ತಮಗೆ ಪತ್ರ ಬರೆದಿದ್ದಾರಾ ಎಂಬ ಮಾಧ್ಯಮಗಳ ಪ್ರಶ್ನೆಗೆ, ”ನನಗೆ ಯಾವ ಪತ್ರವನ್ನು ಬರೆದಿಲ್ಲ. ಆದರೆ, ಅವರ ಜೊತೆಗೆ ಚರ್ಚಿಸಿದ್ದೇನೆ. ಚರ್ಚೆ ಮಾಡಿ, ಅವರ ಒಪ್ಪಿಗೆಯನ್ನು ಪಡೆದುಕೊಂಡೇ ವರದಿ ಮಂಡಿಸಿದ್ದೇನೆ. ರಾಹುಲ್ ಗಾಂಧಿ ಒಪ್ಪಿಗೆ ಇಲ್ಲದೇ ಮಾಡಲು ಆಗುತ್ತದೆಯೇ?” ಎಂದು ಕೇಳಿದರು.
ಜಾತಿ ಗಣತಿ ವರದಿ ಸಂಬಂಧ ಸಂಪುಟ ಸಭೆಯಲ್ಲಿ ಯಾರೂ ವಿರೋಧ ಮಾಡಿಲ್ಲ. ಅಲ್ಲದೇ ಜೋರಾಗಿಯೂ ಮಾತನಾಡಿಲ್ಲ. ನಿಮ್ಮ ಅಭಿಪ್ರಾಯ ಹೇಳುವಂತೆ ತಿಳಿಸಿದ್ದೇನೆ. ಅವರು ಅಭಿಪ್ರಾಯ ನೀಡಿದ ಬಳಿಕ ಸಂಪುಟ ಸಭೆಯಲ್ಲಿ ಮತ್ತೊಮ್ಮೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಮೊನ್ನೆ ಯಾವುದೇ ನಿರ್ಧಾರ ಆಗಿಲ್ಲ” ಎಂದರು.

ಲಿಂಗಾಯತರು ಮತ್ತು ಒಕ್ಕಲಿಗರ ಜನಸಂಖ್ಯೆ ಕಡಿಮೆ ತೋರಿಸಿದಿರಿ ಎಂಬ ಮಾಧ್ಯಮಗಳ ಪ್ರಶ್ನೆಗೆ, ”ಮೆರಿಟ್ ಮೇಲೆ ನಾನು ಮಾತನಾಡಲು ಹೋಗಲ್ಲ. ಮುಂದಿನ ಸಂಪುಟ ಸಭೆಯಲ್ಲಿ ಮಾತನಾಡುತ್ತೇನೆ. ಈಗ ಅಭಿಪ್ರಾಯ ಕೇಳಿದ್ದೇನೆ ಅಷ್ಟೇ. ಯಾರದ್ದೂ ವಿರೋಧ ಇಲ್ಲ. ಒಬ್ಬರಿಗೊಬ್ಬರು ಮಾತನಾಡಿಲ್ಲ” ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

Share this post:

Leave a Reply

Your email address will not be published. Required fields are marked *