ಬೆಂಗಳೂರು :–
ಮಂಗಳಮುಖಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕೆ.ಆರ್.ಪುರಂನ ಬಸವೇಶ್ವರನಗರದ ಗಾಯತ್ರಿ ಲೇಔಟ್ನಲ್ಲಿ ನಡೆದಿದೆ.
ಕೋಟಿ ಕೋಟಿ ರೂಪಾಯಿ ಹಣವನ್ನು ಸಂಪಾದಿಸಿ ಕೋಟ್ಯಾಧಿಪತಿ ಆಗಿದ್ದ ಹಾಗೂ ಕನ್ನಡಪರ ಸಂಘಟನೆಗಳ ಮೂಲಕ ನಾಡಿನ ಸೇವೆಗೆ ಹೋರಾಡುತ್ತಿದ್ದ ಮಂಗಳಮುಖಿ ತನುಶ್ರೀ, ಮದುವೆ ಮಾಡಿಕೊಂಡು ಮೂರು ತಿಂಗಳಿಗೆ ಕೊಲೆ ಆಗಿದ್ದಾರೆ.

ಹಿಂದೆ ಜಗನ್ನಾಥ್ ಎಂಬುವರ ಜೊತೆ ತನುಶ್ರೀ ವಿವಾಹವಾಗಿದ್ದು, ಹಣ ಮತ್ತು ಚಿನ್ನಾಭರಣಕ್ಕಾಗಿ ತನುಶ್ರೀಯನ್ನು ಮೂರು ದಿನಗಳ ಹಿಂದೆ ಕೆ.ಆರ್.ಪುರದ ಬಸವೇಶ್ವರ ನಗರದ ಗಾಯಿತ್ರಿ ಲೇಔಟ್‌ನ ಮನೆಯಲ್ಲಿ ಮಾರಕಾಸ್ತ್ರದಿಂದ ಇರಿದು ಬರ್ಬರ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ.
ಇನ್ನು ಮಂಗಳಮುಖಿ ತನುಶ್ರೀ ಅವರು ಕಳೆದ ಮೂರು ದಿನಗಳ ಹಿಂದೆಯೇ ಕೊಲೆ ಆಗಿದ್ದು, ತಡವಾಗಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಕೃತ್ಯದ ಬಳಿಕ ಪತಿ ಜಗನ್ನಾತ್ ಹಾಗೂ ತನುಶ್ರೀ ಅವರ ಮನೆಗೆಲಸದಾಕೆ ಇಬ್ಬರೂ ಪರಾರಿ ಆಗಿದ್ದಾರೆ.
ತನ್ನ ವಯಸ್ಸಿನ 40 ವರ್ಷಕ್ಕೆ ಬರುವ ವೇಳೆಗೆ ತನುಶ್ರೀ ಕೋಟಿ ಕೋಟಿ ಆಸ್ತಿಯನ್ನು ಹೊಂದಿದ್ದು, ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತೆ ಆಗಿದ್ದರು. ಹಾಗೇ ಸಂಗಮ ಎನ್ ಜಿಓ ನಡೆಸುತ್ತಿದ್ದ ತನುಶ್ರೀ ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಆಸ್ತಿವಂತೆ ಎಂಬುದನ್ನು ನೋಡಿದ್ದ ಜಗನ್ನಾಥ್ ಮದುವೆ ಮಾಡಿಕೊಂಡು 3 ತಿಂಗಳು ಜೊತೆಯಲ್ಲಿದ್ದು, ಇದೀಗ ಹಣಕ್ಕಾಗಿ ಕೊಲೆ ಬೆನ್ನಲ್ಲಿಯೇ ಪರಾರಿ ಆಗಿದ್ದಾನೆ ಎನ್ನುವ ಶಂಕೆ ವ್ಯಕ್ತವಾಗಿದೆ.

ಈ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕೆ.ಆರ್.ಪುರಂ ಠಾಣೆಯ ಪೋಲಿಸರು ಪರಿಶೀಲನೆ ಮಾಡಿದ್ದಾರೆ. ಇನ್ನು ನೂರಾರು ಮಂಗಳಮುಖಿಯರು ಜಮಾವಣೆಗೊಂಡಿದ್ದು, ಮಂಗಳಮುಖಿಯರಿಗೆ ನಾಯಕಿಯಂತಿದ್ದ ತನುಶ್ರೀಯನ್ನು ಕಳೆದುಕೊಂಡು ದುಃಖಿತರಾಗಿದ್ದಾರೆ.
ತನುಶ್ರೀ ಬಳಿ ಕೋಟಿ ಕೋಟಿ ಆಸ್ತಿ ಇರುವುದನ್ನು ನೋಡಿದ್ದ ಜಗನ್ನಾಥ್ ಆಸ್ತಿ ಹೊಡೆಯುವುದಕ್ಕೆಂದಲೇ ಮದುವೆ ಮಾಡಿಕೊಂಡಿದ್ದಾನೆಯೇ ಎಂಬ ಶಂಕೆಯೂ ಪೊಲೀಸರಿಗೆ ವ್ಯಕ್ತವಾಗಿದೆ. ಹೀಗಾಗಿ ನಾಪತ್ತೆಯಾಗಿರುವ ಪತಿ ಜಗನ್ನಾಥ್ ಹಾಗೂ ತನುಶ್ರೀ ಮನೆಯ ಕೆಲಸದಾಕೆ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಮಂಗಳಮುಖಿಯನ್ನು ಜೀವನ ಕೊಡುವುದಾಗಿ ಮದುವೆ ಮಾಡಿಕೊಂಡು, ಆಸ್ತಿಗಾಗಿ ಕೊಲೆ ಮಾಡಿರುವ ಸಾಧ್ಯತೆ ಇದೆ. ಇದಕ್ಕೆ ತನುಶ್ರೀ ಮನೆ ಕೆಲಸದಾಕೆಯೂ ಸಾಥ್ ನೀಡಿರುವ ಅನುಮಾನವೂ ಸಹ ಇದೆ. ಹೀಗಾಗಿ ಜಗನ್ನಾಥ್ ಮತ್ತು ಮನೆ ಕೆಲಸದ ಮಹಿಳೆ ಇಬ್ಬರೂ ಸಂಬಂಧ ಹೊಂದಿದ್ದರೇ ಎಂಬುದನ್ನು ಪತ್ತೆ ಮಾಡಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.
