ಬೆಂಗಳೂರು :–
ಬಿಬಿಎಂಪಿಯು ಗುರುವಾರ ಆಯೋಜಿಸಿದ್ದ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ 12,692 ಪೌರ ಕಾರ್ಮಿಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಯಂ ನೇಮಕಾತಿ ಪತ್ರ ವಿತರಿಸಿ
ಮಾತನಾಡಿದ ಅವರು, ‘ಸ್ವಚ್ಛತಾ ಕೆಲಸ ಕೀಳಲ್ಲ. ಅದು ಗೌರವಯುತವಾದ ಕೆಲಸ. ಪಾಲಿಕೆ ಆಯುಕ್ತರಿಗೆ ಸಿಗುವ ಗೌರವ, ಪೌರಕಾರ್ಮಿಕರಿಗೂ ಸಿಗಬೇಕು. ಅವರು ಗೌರವಯುತವಾದ ಜೀವನ ನಡೆಸುವಂತಾಗಲಿ ಎಂದು ಕಾಯಂ ಆದ ಪೌರಕಾರ್ಮಿಕರಿಗೆ ತಿಂಗಳಿಗೆ ₹39,000 ವೇತನ ನಿಗದಿ ಮಾಡಲಾಗಿದೆ’ ಎಂದರು.

ನಮ್ಮ ಪಕ್ಷ ಮತ್ತು ಸರ್ಕಾರ ಬಡವರ, ಹಿಂದುಳಿದವರ, ತುಳಿತಕ್ಕೆ ಒಳಗಾದವರ ಪರ ಇದ್ದೇ ಇದೆ. ಪೌರಕಾರ್ಮಿಕರಿಗೆ ಮೊದಲು ತಿಂಗಳ ವೇತನ ₹7,000 ಇತ್ತು. ಅದೂ ಗುತ್ತಿಗೆದಾರರ ಮೂಲಕ ಪಾವತಿ ಆಗುತ್ತಿತ್ತು. ಅದರಲ್ಲಿ ಬಹಳ ಸಮಸ್ಯೆ ಇತ್ತು. ನಮ್ಮ ಹಿಂದಿನ ಸರ್ಕಾರದಲ್ಲಿ ಅವರ ವೇತನವನ್ನು ₹17,000ಕ್ಕೆ ಹೆಚ್ಚಿಸಿದ್ದೆವು. ನೇರವಾಗಿ ಪೌರಕಾರ್ಮಿಕರೇ ವೇತನ ಪಡೆಯುವ ವ್ಯವಸ್ಥೆ ಜಾರಿಗೆ ತಂದಿದ್ದೆವು. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸೇವೆ ಕಾಯಂ ಮಾಡಿದ್ದೇವೆ’ ಎಂದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ಪೌರಕಾರ್ಮಿಕರ ಸೇವೆ ಕಾಯಂ ನಮ್ಮ ಪ್ರಣಾಳಿಕೆಯಲ್ಲಿ ಇತ್ತು. ನಾವು ಭರವಸೆಯನ್ನು ಈಡೇರಿಸಿದ್ದೇವೆ. ಒಂದು ರೂಪಾಯಿ ಲಂಚ ಪಡೆಯದೇ 12,692 ಪೌರ ಕಾರ್ಮಿಕರಿಗೆ ಕಾಯಂ ಹುದ್ದೆ ನೀಡಿದ್ದೇವೆ. ಅವರು ನಿವೃತ್ತಿಯಾದಾಗ ಅವರ ಖಾತೆಯಲ್ಲಿ ₹10 ಲಕ್ಷ ಠೇವಣಿ ಇರಿಸಲಾಗುತ್ತದೆ. ತಿಂಗಳಿಗೆ ₹6,000 ಪಿಂಚಣಿ ನೀಡಲಾಗುತ್ತದೆ’ ಎಂದು ಹೇಳಿದರು.
‘ರಾಷ್ಟ್ರಕವಿ ಕುವೆಂಪು ಅವರು ಶಿವನನ್ನು ಪೌರಕಾರ್ಮಿಕರಿಗೆ ಹೋಲಿಸಿದ್ದಾರೆ. ಶಿವನನ್ನು ಅವರು ‘ಜಗದ ಜಲಗಾರ’ ಎಂದಿದ್ದಾರೆ. ಸ್ವಚ್ಛತಾ ಸೇನಾನಿಗಳದ್ದು ಅಷ್ಟು ಮಹತ್ವದ ಕೆಲಸ. ನೀವು ಇಲ್ಲದೇ ಇದ್ದರೆ, ಬೆಂಗಳೂರು ನಾರುತ್ತದೆ. ಪೌರಕಾರ್ಮಿಕರ ಅಭಿವೃದ್ಧಿಗಾಗಿ ಬಿಬಿಎಂಪಿ ಬಜೆಟ್‌ನಲ್ಲಿ ₹600 ಕೋಟಿ, ಅವರ ಮಕ್ಕಳ ಶಿಕ್ಷಣಕ್ಕಾಗಿ ₹700 ಕೋಟಿ ತೆಗೆದಿರಿಸಿದ್ದೇವೆ’ ಎಂದರು.
‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಡಿ’ ದರ್ಜೆ ನೌಕರರಿಗೆ ಸಿಗುವ ಸಂಬಳ, ಇತರ ಎಲ್ಲ ಸವಲತ್ತುಗಳು ಪೌರಕಾರ್ಮಿಕರಿಗೂ ಸಿಗಲಿವೆ’ ಎಂದರು
ಕಾಯಂ ನೇಮಕಾತಿ ಸೌಲಭ್ಯ ಪಡೆದಿರುವ 12,692 ಪೌರಕಾರ್ಮಿಕರಿಗೆ ಇನ್ನು ಮುಂದೆ ತಿಂಗಳಿಗೆ ₹39,000 ವೇತನ, ನಿವೃತ್ತಿಯ ವೇಳೆ ₹10 ಲಕ್ಷ ಇಡುಗಂಟು ಮತ್ತು ₹6,000 ಪಿಂಚಣಿ ಸಿಗಲಿದೆ.