ಬೆಳಗಾವಿ :–
ಪಹಲ್ಲಾಮ್ ದಾಳಿಯಲ್ಲಿ ಮೃತಪಟ್ಟ ಪ್ರವಾಸಿಗರಿಗೆ ನ್ಯಾಯ ಸಿಕ್ಕಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.
ಪಟ್ಟಣದಲ್ಲಿ ಮಾತನಾಡಿದ ಅವರು ಭಾರತ- ಪಾಕ್ ನಡುವೆ ಕದನ ವಿರಾಮ ಹಿನ್ನೆಲೆ ಈಗ ಯುದ್ಧ ಸ್ಥಗಿತಗೊಂಡಿದೆ.
ಮುಂದೆ ಏನು ಮಾಡಬೇಕು ಎಂಬ ಚಿಂತನೆ ಮಾಡಬೇಕು. ಪಹಲ್ಲಾಮ್ ನಲ್ಲಿ ಮೃತಪಟ್ಟ 26 ಜನರಿಗೆ ನ್ಯಾಯ ಸಿಕ್ಕಿಲ್ಲ , ಅದಕ್ಕಾಗಿ ಮತ್ತೆ ಕಾಯಬೇಕಾಗುತ್ತದೆ ಎಂದು ಹೇಳಿದ್ದಾರೆ.
ಪೂರ್ಣ ಪ್ರಮಾಣದ ಯುದ್ಧ ಆಗುತ್ತದೆ ಎಂದು ಎಲ್ಲರೂ ನಿರೀಕ್ಷೆ ಮಾಡಿದ್ದರು. ಆದರೆ ಅದು ಆಗಿಲ್ಲ, ಇಷ್ಟಕ್ಕೆ ಸ್ಥಗಿತಗೊಂಡಿದೆ. ಮುಂದೆ ದೇಶವನ್ನು ಯಾವ ರೀತಿ ಕಟ್ಟಬೇಕು ಎನ್ನುವುದು ಮುಂದಿರುವ ಸವಾಲಾಗಿದೆ ಎಂದರು.
1971ರಲ್ಲಿ ಇಂದಿರಾ ಗಾಂಧಿ ಮಾದರಿಯಲ್ಲಿ ಪಾಕ್ ಕಟ್ಟಿ ಹಾಕುವ ವಿಚಾರದ ಬಗ್ಗೆ ಬಿಜೆಪಿಯವರೇ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.
ಬಿಜೆಪಿಯವರು ಸೇರಿ ಎಲ್ಲರೂ ಯುದ್ಧ ನಿಲ್ಲಿಸಬಾರದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ, ಈಗ ಯುದ್ಧ ನಿಂತಿದೆ. ಹಾಗಾಗಿ, ಏನೂ ಮಾಡಲು ಆಗುವುದಿಲ್ಲ ಎಂದು ಜಾರಕಿಹೊಳಿ ಹೇಳಿದರು.
ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ವಹಿಸಿದ್ದಕ್ಕೆ ಆಕ್ಷೇಪ ವ್ಯಕ್ತವಾಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಅದು ಅಂತಾರಾಷ್ಟ್ರೀಯ ವಿಚಾರ. ಟ್ರಂಪ್ ಯಾಕೆ ಮಧ್ಯಸ್ತಿಕೆ ವಹಿಸಿದರು ಮತ್ತು ಅವರಿಗೆ ಯಾರು ಮನವಿ ಮಾಡಿಕೊಂಡರು ಎಂಬ ವಿಚಾರ ಒಂದು ದಿನ ಹೊರಗೆ ಬರುತ್ತದೆ. ಅಲ್ಲಿಯವರೆಗೆ ನಾವೆಲ್ಲಾ ಕಾಯಬೇಕು ಎಂದರು.