ಬೆಂಗಳೂರು :–
ಕನ್ನಡಿಗರ ನೆಚ್ಚಿನ ಜೀ ಕನ್ನಡ ನ್ಯೂಸ್ ವಾಹಿನಿಯು ರಾಜ್ಯದ ವಿವಿಧ ಕ್ಷೇತ್ರಗಳ ಯುವ ಸಾಧಕರನ್ನು ಗುರುತಿಸಿ ಯುವರತ್ನ ಅವಾರ್ಡ್ಸ್ 2025 ಪ್ರದಾನ ಮಾಡಿದೆ. ಬುಧವಾರ ಸಂಜೆ ಬೆಂಗಳೂರಿನ ಪ್ರತಿಷ್ಠಿತ ಫೋರ್ ಸೀಸನ್ಸ್ ಹೋಟೆಲ್‌ನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ನಾಡಿನ 50 ಸಾಧಕರನ್ನು ಗೌರವಿಸಿ ಸನ್ಮಾನಿಸಲಾಯಿತು. ಉದ್ಯಮ, ಕಲೆ, ಕ್ರೀಡೆ, ಆರೋಗ್ಯ, ಕೃಷಿ, ಸಮಾಜ ಸೇವೆ, ರಾಜಕಾರಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಶ್ರಮಿಸುತ್ತಿರುವ ಸಾಧಕರನ್ನು ಗೌರವಿಸಿ ಅಭಿನಂದಿಸಲಾಯಿತು.

ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಘನ ಉಪಸ್ಥಿತಿ ವಹಿಸಿ ಯುವ ಸಾಧಕರ ಸೇವೆಯನ್ನು ಕೊಂಡಾಡಿದರು. ಪ್ರತಿ ವರ್ಷವೂ ಜೀ ಕನ್ನಡ ನ್ಯೂಸ್ ವಾಹಿನಿಯು ರಾಜ್ಯದ ಉದ್ದಗಲದ ಎಲೆಮರೆಯ ಕಾಯಂತಿರೋ ಪ್ರಾಮಾಣಿಕ, ಕೌಶಲ್ಯ, ಬದ್ಧತೆಯ ಸಾಧಕರನ್ನು ಗುರುತಿಸಿ ಗೌರವಿಸುವ ಮೂಲಕ ಅವರಿಗೆ ಪ್ರೇರಣೆ ನೀಡುತ್ತಿದೆ. ಇದನ್ನು ನೋಡಿ ಮತ್ತಷ್ಟು ಯುವಕರು ಪ್ರೇರಣೆ ಪಡೆಯುತ್ತಾರೆ ಎಂದರು. ಇನ್ನು ನಮ್ಮ ಒಗ್ಗಟ್ಟೇ ದೇಶದ ಒಗ್ಗಟ್ಟು. ನಾವೆಲ್ಲರೂ ಒಗ್ಗಟ್ಟಾಗಿ ಸೌಹಾರ್ದಯುತವಾಗಿ ಬದುಕಬೇಕು. ದೇವರು ಎಲ್ಲರಿಗೂ ಒಂದೇ. ಒಬ್ಬರಿಗೆ ಒಂದೊಂದು ರೀತಿ ಮಾಡುವುದಿಲ್ಲ. ನಾವೆಲ್ಲರೂ ಒಗ್ಗಟ್ಟಾಗಿ ಬದುಕಬೇಕು ಎಂದು ಸೌಹಾರ್ದತೆಯ ಬಗ್ಗೆ ಒತ್ತಿ ಹೇಳಿದ್ರು. ಇದೇ ವೇಳೆ ಪ್ರಶಸ್ತಿ ಪುರಸ್ಕೃತರಿಗೆ ಶುಭ ಹಾರೈಸಿದ್ರು.
ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವ ವ್ಯಕ್ತಿಗಳನ್ನು ಗುರುತಿಸಿ ಜೀ ಕನ್ನಡ ನ್ಯೂಸ್ ವಾಹಿನಿ ಗೌರವಿಸುತ್ತಿದೆ. ಇದು ನಿಮಗೆ ಇನ್ನೂ ಹೆಚ್ಚಿನ ಪ್ರೇರಣೆ ನೀಡಲಿ. ತಮ್ಮ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಕೆಲಸ ಮಾಡಿ ಎಂದು ಯುವರತ್ನಗಳಿಗೆ ಹಾರೈಸಿದರು.

ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಮಾತನಾಡಿ, ಮನುಷ್ಯ ಇವತ್ತು ಹತ್ತಾರು ಸವಾಲುಗಳನ್ನು ಎದುರಿಸಿ ತನ್ನ ಬದುಕನ್ನು ಕಟ್ಟಿಕೊಳ್ಳಬೇಕಿದೆ. ಈಗಿನ ವಿಜ್ಞಾನ ಮತ್ತು ತಂತ್ರಜ್ಞಾನದ ಯುಗದಲ್ಲಿ ಬದುಕು ಕಟ್ಟಿಕೊಳ್ಳಲು ತಿಣಿಕಾಡಬೇಕಿದೆ. ಬದಲಾಗುತ್ತಿರುವ ಸಮಾಜ, ಜೀವನ, ವ್ಯವಸ್ಥೆಗೆ ತಕ್ಕಂತೆ ಯುವಕರು ಕೆಲಸ ಮಾಡಬೇಕಿದೆ. ಜೀ ಕನ್ನಡ ನ್ಯೂಸ್ 50 ಸಾಧಕರಿಗೆ ಪ್ರಶಸ್ತಿ ಕೊಡುತ್ತಿರೋದು 7 ಕೋಟಿ ಕನ್ನಡಿಗರಿಗೆ ಕಟ್ಟಂತಾಗಿದೆ ಎಂದರು.
ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಆತ್ಮವಿಶ್ವಾಸದಿಂದ ಸಕಾರಾತ್ಮಕವಾಗಿ ಚಿಂತಿಸುವುದರಿಂದ ನಾವು ಮುಂದೆ ಬರುತ್ತೇವೆ. ಪ್ರಧಾನಿ ಮೋದಿ ಅವರ ಆತ್ಮ ನಿರ್ಭರ ಭಾರತದ ಕನಸು ನನಸಾಗುತ್ತಿದೆ. ವಿಶ್ವದಲ್ಲಿ 11ನೇ ಸ್ಥಾನದಲ್ಲಿದ್ದ ನಮ್ಮ ಆರ್ಥಿಕತೆ ಈಗ 4ನೇ ಸ್ಥಾನಕ್ಕೆ ಬಂದಿದೆ. ಚೀನಾ, ಅಮೆರಿಕಾವನ್ನೂ ಹಿಂದೆ ಹಾಕಲು ನಾವೆಲ್ಲರೂ ಮುಂದೆ ಬರಬೇಕು. ಆ ಕಾಲವೂ ದೂರವಿಲ್ಲ. ನಿಮ್ಮಂತಹ ಯುವಕರು ಮತ್ತಷ್ಟು ಸಾಧನೆ ಮಾಡಿದಾಗ ಇದು ಸಾಧ್ಯ ಎಂದು ಪ್ರಶಸ್ತಿ ಪುರಸ್ಕೃತರನ್ನು ಹುರಿದುಂಬಿಸಿದರು.
ನಟ ಕಿಚ್ಚ ಸುದೀಪ್ ಕಾರ್ಯಕ್ರಮಕ್ಕೆ ಬರಬೇಕಿತ್ತು. ಕಾರಣಾಂತರಗಳಿಂದ ಬರಲಾಗಲಿಲ್ಲ. ಆದರೆ ಅವರು ಜೀ ಕನ್ನಡ ನ್ಯೂಸ್ ಯುವರತ್ನ ಪ್ರಶಸ್ತಿ ಪುರಸ್ಕೃತರಿಗೆ ವಿಡಿಯೋ ಮೂಲಕ ತಮ್ಮ ಪ್ರೀತಿಯ ಸಂದೇಶ ಕಳುಹಿಸಿದ್ರು. ತಮ್ಮ ಸಾಧನೆ ಎಲ್ಲರಿಗೂ ಪ್ರೇರಣೆಯಾಗಲಿ ಎಂದು ಎಲ್ಲರಿಗೂ ಶುಭ ಹಾರೈಸಿದರು.
ನಟ ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪಾ ಅರುಣ್‌ಕುಮಾರ್ ಅವರು ಕೂಡ ಕಾರ್ಯಕ್ರಮಕ್ಕೆ ಬಂದು ತುಂಬಾ ಖುಷಿ ಪಟ್ಟರು. ಯುವರತ್ನಗಳನ್ನು ನೋಡಿ ಹೃದಯದಿಂದ ಹರಸಿದ್ರು. ಜೊತೆಗೆ ರೈತರ ಬಗೆಗಿನ ತಮ್ಮ ಕಳಕಳಿ ಹಾಗೂ ಯೋಜನೆಗಳ ಬಗ್ಗೆ ಹೇಳಿಕೊಂಡ್ರು.
ಹಿರಿಯ ನಟಿ ಸುಧಾರಾಣಿ ಮಾತನಾಡಿ, ಜೀ ವಾಹಿನಿ ನನ್ನ ಕುಟುಂಬ. ನನ್ನ ಕುಟುಂಬದ ಕಾರ್ಯಕ್ರಮಕ್ಕೆ ಬಂದಿದ್ದು ನನಗೆ ತುಂಬಾ ಖುಷಿ ಆಯಿತು. ನಿಸ್ವಾರ್ಥದಿಂದ ಕೆಲಸ ಮಾಡಿದವರನ್ನು ಗುರುತಿಸಿ ಬೆನ್ನು ತಟ್ಟೋರು ಕಡಿಮೆ. ಅಂತಹ ಕೆಲಸವನ್ನು ನಮ್ಮ ಜೀ ವಾಹಿನಿ ಮಾಡುತ್ತಿರೋದು ಸಂತೋಷದ ವಿಷಯ. ಎಲ್ಲಾ ಸಾಧಕರಿಗೂ ಅಭಿನಂದನೆಗಳು ಎಂದರು.
ವೇದಿಕೆ ಮೇಲೆ ನಟರಾದ ಅಜಯ್ ರಾವ್, ಯುವ ರಾಜ್‌ಕುಮಾರ್, ಚಿಕ್ಕಣ್ಣ ಉಪಸ್ಥಿತರಿದ್ದು, ಸಾಧಕರ ಮುಕುಟಕ್ಕೆ ಗರಿ ಮೂಡಿಸಿ ಅಭಿನಂದಿಸಿದರು.
ಕೊನೆಯದಾಗಿ ಜೀ ಕನ್ನಡ ನ್ಯೂಸ್ ಸಂಪಾದಕಾರದ ರವಿ.ಎಸ್ ಅವರು ಸಮಾರೋಪ ಭಾಷಣದಲ್ಲಿ ಎಲ್ಲಾ 50 ಅವಾರ್ಡಿಗಳ ಸಾಧನೆ ಬಗ್ಗೆ ಕೊಂಡಾಡಿದರು. ಪ್ರತಿಭೆಯುಳ್ಳ ಕನ್ನಡದ ಮಣ್ಣಿನ ಮಕ್ಕಳನ್ನ ರಾಜ್ಯಕ್ಕೆ ಪರಿಚಯಿಸಿದ್ದೇವೆ ಎಂದು ಅವಾರ್ಡಿಗಳನ್ನ ಅಭಿನಂದಿಸಿದರು. ಮುಂದಿನ ಕಾರ್ಯಕ್ರಮದಲ್ಲಿ ಎಲೆಮರೆಯ ಕಾಯಿಯಂತಿರೋ ಮತ್ತಷ್ಟು ಸಾಧಕರನ್ನ ಗುರುತಿಸಿ ಗೌರವಿಸಲಾಗುವುದು. ಈ ನಿಟ್ಟಿನಲ್ಲಿ ನಮ್ಮ ತಂಡ ಕಾರ್ಯೋನ್ಮುಖವಾಗಿದೆ ಅಂತಲೂ ಹೇಳಿದರು. ಜೊತೆಗೆ ಜೀ ಕನ್ನಡ ನ್ಯೂಸ್ ಸಿಬ್ಬಂದಿಯ ಪರಿಶ್ರಮಕ್ಕೆ ಮೆಚ್ಚುಗೆ ಸೂಚಿಸಿದರು.