ಚಿಕ್ಕೋಡಿ :–
“ಮಾದಕ ವ್ಯಸನ ನಿರ್ಮೂಲನಾ ಅಭಿಯಾನ ಜಾಗೃತಿ ಕಾರ್ಯಕ್ರಮ”
ಮಾದಕ ವಸ್ತುಗಳು ಯುವಜನರಿಗೆ ಮಾರಕವಾಗಿ ಪರಿಣಮಿಸಿದ್ದು, ದುಶ್ಚಟದಿಂದ ದೂರವಾದರೆ ಮಾತ್ರ ಆರೋಗ್ಯಕರ ಮತ್ತು ಸದೃಢ ಸಮಾಜ ನಿರ್ಮಿಸಲು ಸಾಧ್ಯ ಎಂದು ಚಿಕ್ಕೋಡಿ ವೃತ್ತ ಪೊಲೀಸ್ ನೀರಿಕ್ಷಕರಾದ ವಿಶ್ವನಾಥ ಚೌಗಲೆ ರವರು ಹೇಳಿದರು.
ಅವರು ಕೆ ಎಲ್ ಇ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಏರ್ಪಡಿಸಿರುವ ಮಾದಕ ವ್ಯಸನ ನಿರ್ಮೂಲನಾ ಅಭಿಯಾನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಮಾದಕವಸ್ತುಗಳ ಬಳಕೆಯಿಂದ ಆರೋಗ್ಯದ ಮೇಲೆ ಆಗುವ ದುಷ್ಟರಿಣಾಮಗಳು,
ಈ ಬಗ್ಗೆ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಸಮಾಜದ ಸ್ವಾಸ್ಥ್ಯ ಕಾಪಾಡುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಮೇಲಿರುತ್ತದೆ. ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡಲು ಎಲ್ಲರೂ ಪಣ ತೊಡಬೇಕು. ಪ್ರತಿಯೊಬ್ಬರೂ ಕಾನೂನು ಪರಿಪಾಲಿಸುವ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡಬೇಕು. ಸಾಮಾಜಿಕ ಮಾಧ್ಯಮ ಹಾಗೂ ಜಾಲತಾಣಗಳಲ್ಲಿ ಆಗುವ ವಂಚನೆ ಹಾಗೂ ಸೈಬರ ಅಪರಾಧಗಳ ಬಗ್ಗೆ ಎಚ್ಚರಿಕೆ ವಹಿಸುವುದು ಬಹಳ ಅಗತ್ಯ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ಅಧ್ಯಕ್ಷತೆ ವಹಿಸಿದ ಕೆ ಎಲ್ ಇ ಯ ಆಯುರ್ವೇದ ಕಾಲೇಜಿನ ಪ್ರಾಚಾರ್ಯರಾದ ಡಾ. ಕಿರಣ ಮುತ್ನಾಳಿರವರು ಮಾತನಾಡಿ ಯುವಶಕ್ತಿ ಈ ದೇಶದ ಬಹು ದೊಡ್ಡ ಆಸ್ತಿ. ಆ ಆಸ್ತಿಯನ್ನು ಜೋಪಾನದಿಂದ ಕಾಪಾಡಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಯುವಕರು ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡು ಒಳ್ಳೆಯ ಜೀವನ ರೂಪಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ಡಾ.ನೀತಿನ ಕಾರ್ಯಕ್ರಮದ ಬಗ್ಗೆ ವಿವರಿಸಿದರು ಕಾರ್ಯಕ್ರಮದಲ್ಲಿ ಸಿ.ಬಿ ಕೋರೆ ತಾಂತ್ರಿಕ ವಿದ್ಯಾಲಯದ ಪ್ರಾಚಾರ್ಯರಾದ ಡಾ. ದರ್ಶನ ಬಿಳ್ಳೂರ, ಡಾ. ಬಿ.ಬಿ.ದೇಸಾಯಿ, ಮತ್ತು ಅಧ್ಯಾಪಕರು, ವೈದ್ಯರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿ ನಿಷಾ ಗುಂಡೆ ಅವರು ನಿರೂಪಿಸಿದರು. ಡಾ. ಹೊನವಾಡ ಸ್ವಾಗತಿಸಿದರು, ಡಾ. ಶಿವಣ್ಣವರ ವಂದಿಸಿದರು.





