ಚಿಕ್ಕೋಡಿ :–
ಜಾಗೃತಿ ತಾಲೂಕು ಒಕ್ಕೂಟ ಮತ್ತು ಸಂಗಮ್ ಮಹಿಳಾ ಜಿಲ್ಲಾ ಒಕ್ಕೂಟದವರು ವಿಧವೆಯರ ಪಿಂಚಣಿ ಹೆಚ್ಚಳಕ್ಕೆ ಆಗ್ರಹಿಸಿ .ತಾಲೂಕ ತಹಶೀಲ್ದಾರಾದ ರಾಜೇಶ್ ಬುರ್ಲಿ ಅವರಿಗೆ ಮನವಿ ಸಲ್ಲಿಸಿದರು
ಕರ್ನಾಟಕ ಸರ್ಕಾರವು ಸಾಮಾಜಿಕ ಭದ್ರತೆ ಮತ್ತು ಜೀವನ ನಿರ್ವಹಣೆ ಅಡಿಯಲ್ಲಿ ವಿವಿಧ ಪಿಂಚಣಿ ಯೋಜನೆಗಳನ್ನು ಜಾರಿಗೊಳಿಸಿದೆ. ಅದರಲ್ಲಿ ವಿಧವೆಯರಿಗೆ ಕೇವಲ ರೂ 800 ಪಿಂಚಣಿ ನೀಡುತ್ತಿದ್ದು ಈ ಪಿಂಚಣಿಯು ವಿಧವೆಯರ ಮಕ್ಕಳ ಶಿಕ್ಷಣ ಮತ್ತು ಕುಟುಂಬ ನಿರ್ವಹಣೆಗೆ ಯಾವುದಕ್ಕೂ ಸಾಲದು.
ಹೆಚ್ಚಿದ ಬೆಲೆಯೇರಿಕೆ ಮತ್ತು ಕಡಿಮೆ ಸಂಬಳದಿಂದಾಗಿ ಅಸಂಘಟಿತ ವಲಯದಲ್ಲಿ ಜೀವನ ಸಾಗಿಸುತ್ತಿರುವ ಮಹಿಳೆಯರು ಕಷ್ಟದ ಬದುಕಿನಲ್ಲಿದ್ದಾರೆ. ಅದರಲ್ಲೂ ಗಂಡು ಸಂಗಾತಿಯನ್ನು ಕಳೆದುಕೊಂಡ ವಿಧವೆಯರ ಜೀವನವು ಅತ್ಯಂತ ಚಿಂತಾಜನಕವಾಗಿದೆ. ಚಿಕ್ಕ ವಯಸ್ಸಿನಲ್ಲಿ ವಿಧವೆಯಾದ ಮಹಿಳೆಯರ ಬಗೆಗಿನ ಸಮಾಜದ ಧೋರಣೆ ಬದಲಾಗಬೇಕು. ಇಂತಹ ಮಹಿಳೆಯರ ಬದುಕು ಮತ್ತು ಅವರ ಮಕ್ಕಳ ಶಿಕ್ಷಣಕ್ಕೆ ಭದ್ರತೆ ಇರಬೇಕಾದರೆ ವಿಧವೆಯರ ಪಿಂಚಣಿ ಹೆಚ್ಚಳವಾಗಬೇಕು.
ನಮ್ಮ ದೇಶದ ಸಂವಿಧಾನವು ಎಲ್ಲಾ ನಾಗರೀಕರಿಗೆ ಒಂದೇ ಮೌಲ್ಯ ನೀಡಿದೆ. ಆದರೆ ನಮ್ಮ ಶಾಸಕಾಂಗದ ಪ್ರತಿನಿಧಿಗಳು ತಮ್ಮ ಅಧಿಕಾರ ನಿವೃತ್ತಿ ನಂತರ ಸಾವಿರ ಸಾವಿರ ಪಿಂಚಣಿ ಜೊತೆಗೆ ವೈದ್ಯಕೀಯ ಚಿಕಿತ್ಸೆ ಹಾಗೂ ವಿವಿಧ ರೀತಿಯ ಸವಲತ್ತುಗಳನ್ನು ಪಡೆಯುತ್ತಾರೆ.
ಆದರೆ ಜನಸಾಮಾನ್ಯರಾದ ನಮಗೆ ಅದರಲ್ಲೂ ದುರ್ಬಲ ಬದುಕು ಬದುಕುತ್ತಿರುವ ನಮ್ಮಂತಹ ಮಹಿಳೆಯರಿಗೆ ಗೌರವಯುತ ಜೀವನ ಭದ್ರತೆ ಇಲ್ಲ. ನಾವು ನಮ್ಮ ಹಕ್ಕುಗಳಿಗಾಗಿ ಮತ್ತು ನಮ್ಮ ಘಣತೆಗಾಗಿ ಪಿಂಚಣಿ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಹೋರಾಟಕ್ಕೂ ಸಿದ್ಧರಿದ್ದೇವೆ ಎಂದು ಸಂಗಮ ಜಿಲ್ಲಾ ಮಹಿಳಾ ಒಕ್ಕೂಟ ಹಾಗೂ ಜಾಗೃತಿ ತಾಲೂಕ ಮಹಿಳಾ ಒಕ್ಕೂಟದ ಮಹಿಳೆಯರು ಆಗ್ರಹಿಸಿದರು.





