ಬೆಂಗಳೂರು :–
ಮಲ್ಲೇಶ್ವರದ 7ನೇ ಅಡ್ಡರಸ್ತೆಯ ಸಿಲ್ವರ್ ವ್ಯಾಲಿ ಪಬ್ಲಿಕ್ ಪಿಯು ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಈ ಘಟನೆ ನಡೆದಿದೆ ತುಬಾ ಫಾತೀಮಾ ಜಮೀಲ್ ಎಂಬಾಕೆ ನಿನ್ನೆ ಬೆಳಿಗ್ಗೆ ಗಣಿತ ವಿಷಯ ಬರೆಯಲು ಬಂದವರು ನೇರವಾಗಿ ಶೌಚ ಗೃಹಕ್ಕೆ ಹೋಗಿ ಗಂಟೆಯಾದರೂ ಹೊರ ಬಂದಿರಲಿಲ್ಲ.
ಇನ್ನೇನು ಪರೀಕ್ಷೆ ಆರಂಭವಾಗಬೇಕು ಎನ್ನುವಷ್ಟರಲ್ಲಿ ಹೊರ ಬಂದು ಕ್ಯೂಆರ್ ಕೋಡ್ ಇರುವ ಪ್ರವೇಶ ಪತ್ರ ತೋರಿಸಿ,
ಒಳ ಹೋಗಲು ಪ್ರಯತ್ನಿಸಿದರು. ಆ ಸಂದರ್ಭದಲ್ಲಿ ಮುಖ ಚಹರೆ ಪತ್ತೆ ಅಪ್ಲಿಕೇಶನ್ ಮೂಲಕ ಅವರ ಭಾವಚಿತ್ರ ತೆಗೆದಾಗ ಅವರು ನಕಲಿ ಎಂಬುದು ಗೊತ್ತಾಗಿದೆ.
ತಕ್ಷಣ ಈ ವಿಷಯವನ್ನು ಪ್ರಾಂಶುಪಾಲರ ಗಮನಕ್ಕೆ ತರಬೇಕೆನ್ನುವಷ್ಟರಲ್ಲಿ ಅಲ್ಲಿಂದ ಅವರು ಕಾಲ್ಕಿತ್ತಿದ್ದಾರೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದರು.
ಇವರು ಟಬು ನಾಝ್ ಎಂಬ ನೈಜ ಅಭ್ಯರ್ಥಿಯ ಪ್ರವೇಶ ಪತ್ರಕ್ಕೆ ತನ್ನ ಚಿತ್ರ ಅಂಟಿಸಿಕೊಂಡಿದ್ದರು. ಅಲ್ಲದೆ, ಪರೀಕ್ಷಾ ದಿನಾಂಕಗಳನ್ನೂ ತಪ್ಪಾಗಿ ನಮೂದಿಸಿದ್ದರು ಎಂಬುದು ಗೊತ್ತಾಗಿದೆ. ಈ ಬಗ್ಗೆ ವಿಡಿಯೋ ದೃಶ್ಯ ಸಮೇತ ವರದಿ ನೀಡಲು ಕಾಲೇಜಿನ ಪ್ರಾಂಶುಪಾಲರಿಗೆ ಸೂಚಿಸಲಾಗಿದೆ. ನಂತರ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ವಿವರಿಸಿದ್ದಾರೆ.
ಕೊನೆ ಕ್ಷಣದಲ್ಲಿ ಬಂದು ಸಿಇಟಿ ಪರೀಕ್ಷೆ ಬರೆಯಲು ಪ್ರಯತ್ನಿಸಿದ ಅಭ್ಯರ್ಥಿಯೊಬ್ಬರು ನಕಲಿ ಎಂಬುದನ್ನು ಕ್ಯೂಆರ್ ಕೋಡ್ ಆಧರಿತ ಮುಖ ಚಹರೆ ಪತ್ತೆಹಚ್ಚುವ ಅಪ್ಲಿಕೇಶನ್ ಗುರುತಿಸಿದ್ದು, ಈ ಕುರಿತು ತನಿಖೆಗೆ ಆದೇಶಿಸಲಾಗಿದೆ.