ಬೆಂಗಳೂರು :–
ರಾಜ್ಯದ ಶಾಲಾ ಮಕ್ಕಳಿಗೆ ಸಂಭ್ರಮ ಶನಿವಾರ -ಬ್ಯಾಗ್ ರಹಿತ ದಿನ -ಕಾರ್ಯಕ್ರಮದ ವರದಿಯನ್ನು ಸಲ್ಲಿಸುವ ಕುರಿತು ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ವಿಷಯಕ್ಕೆ ಸಂಬಂಧಿಸಿದಂತೆ ಮಕ್ಕಳಿಗೆ ಸಂತಸದಾಯಕ ಕಲಿಕೆಯನ್ನು ನೀಡಲು ಹಾಗೂ ಶಾಲಾ ಬ್ಯಾಗ್ ಹೊರೆಯನ್ನು ತಗ್ಗಿಸುವ ದೃಷ್ಟಿಯಿಂದ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಪ್ರತಿ ತಿಂಗಳು ಒಂದು ಶನಿವಾರದಂದು ಬ್ಯಾಗ್ ರಹಿತ ದಿನವನ್ನು ಆಚರಿಸುವಂತೆ ಉಲ್ಲೇಖ-೧ ರ ಪತ್ರದಲ್ಲಿ ಆದೇಶಿಸಲಾಗಿದೆ.
ಅದರಂತೆ, ಪ್ರಸಕ್ತ ಸಾಲಿನಲ್ಲಿ ಕ್ರಮವಹಿಸಲು ಉಲ್ಲೇಖ-೨ ರ ಸುತ್ತೋಲೆಯಲ್ಲಿ ಮಾರ್ಗದರ್ಶನ ನೀಡಲಾಗಿದೆ.
ಮಕ್ಕಳನ್ನು ಬಹುಮುಖ ಚಟುವಟಿಕೆಗಳಲ್ಲಿ ತೊಡಗಿಸುವುದರ ಮೂಲಕ ನಾಗರಿಕ ಪ್ರಜ್ಞೆಯನ್ನು ಬೆಳೆಸಲು, ವಿವಿಧ ಥೀಮ್ ಗಳನ್ನು ಆಧರಿಸಿ ವಿದ್ಯಾರ್ಥಿಗಳಿಗಾಗಿ ೧0 ಸ್ವಯಂ ವಿವರಣಾತ್ಮಕ ಮಾಡ್ಯೂಲ್ಗಳನ್ನು ಹಾಗೂ ಶಿಕ್ಷಕರಿಗೆ ಮಾರ್ಗದರ್ಶಿ ಕೈಪಿಡಿಯನ್ನು DSERT ವತಿಯಿಂದ ಸಿದ್ಧಪಡಿಸಲಾಗಿದೆ.
ಸದರಿ ಮಾಡ್ಯೂಲ್ ಗಳು ಅರಿವು, ಅನುಭವ ಮತ್ತು ಅವಲೋಕನ ಎಂಬ ಮೂರು ಹಂತಗಳನ್ನು ಹೊಂದಿದ್ದು, ವಿದ್ಯಾರ್ಥಿಗಳೇ ಸ್ವತಃ ಕೈಗೊಳ್ಳಬಹುದಾದ ಚಟುವಟಿಕೆಗಳಾಗಿವೆ.





