ಬೆಂಗಳೂರು :–
ಬೆಂಗಳೂರು ಮಾತ್ರವಲ್ಲದೆ ಕರ್ನಾಟಕ ಸೇರಿದಂತೆ ಇಡೀ ದೇಶದಲ್ಲೇ ನಾಯಿ, ಹಾವು ಹಾಗೂ ಇತರೆ ಪ್ರಾಣಿಗಳ ಕಡಿತದಿಂದ ಸಾವಾಗುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಈ ವಿಚಾರವಾಗಿ ಸುಪ್ರೀಂ ಕೋರ್ಟ್ ಎಲ್ಲಾ ರಾಜ್ಯಗಳಿಗೆ ಈ ಕುರಿತು ಸಮಗ್ರ ವರದಿ ನೀಡುವಂತೆ ಸೂಚನೆ ನೀಡಿತ್ತು.
ಕೆಲವು ರಾಜ್ಯಗಳು ಮಾತ್ರ ಸುಪ್ರೀಂ ಕೋರ್ಟ್ ಗೆ ವರದಿ ನೀಡಿದ್ದು, ಈ ಹಿನ್ನೆಲೆಯಲ್ಲಿ ಕರ್ನಾಟಕ ಸೇರಿದಂತೆ ವರದಿ ಸಲ್ಲಿಸದ ರಾಜ್ಯಗಳಿಗೆ ಇತ್ತೀಚಿಗೆ ಚೀಮಾರಿ ಹಾಕಿತ್ತು. ಸುಪ್ರೀಂ ಕೋರ್ಟ್ ಆದೇಶದ ಹಿನ್ನಲೆಯಲ್ಲಿ ರಾಜ್ಯದ ಆಸ್ಪತ್ರೆಗಳಲ್ಲಿ ಪ್ರಾಣಿ ಕಡಿತಕ್ಕೆ ಮುಂಗಡ ಹಣ ಕೇಳದೇ ತಕ್ಷಣ ಪ್ರಥಮ ಚಿಕಿತ್ಸೆ ನೀಡುವುದು ಕಡ್ಡಾಯಗೊಳಿಸಿ ಸರ್ಕಾರ ಆದೇಶಿಸಿದೆ.
ಸುಪ್ರೀಂ ಕೋರ್ಟ್ ಸೂಚನೆ ಬೆನ್ನಲ್ಲೇ ಎಚ್ಚೆತ್ತು ಕರ್ನಾಟಕ ಸರ್ಕಾರ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆ ಗಳಿಗೆ ಸುತ್ತೋಲೆ ಹೊರಡಿಸಿದೆ. ಹೌದು ಕೋರ್ಟ್ ಎಚ್ಚರಿಕೆಯ ನಂತರ ಸರ್ಕಾರವು ನಾಯಿ, ಹಾವು ಕಡಿತಕ್ಕೆ ಉಚಿತ ತುರ್ತು ಚಿಕಿತ್ಸೆ, ಆಯಂಟಿ-ರೇಬೀಸ್ ಲಸಿಕೆ ಮತ್ತು ಪ್ರಥಮ ಚಿಕಿತ್ಸೆ ನೀಡಲು ಹೊಸ ಸುತ್ತೋಲೆ ಹೊರಡಿಸಿದೆ.
ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಕಡ್ಡಾಯವಾಗಿ ಆಯಂಟಿ-ರೇಬೀಸ್ ಲಸಿಕೆಗಳು ಮತ್ತು ರೇಬೀಸ್ ಇಮ್ಯುನೊಗ್ಲೋಬುಲಿನ್‌ಗಳ ಕಡ್ಡಾಯ ಸಂಗ್ರಹ ಹೊಂದಿರಬೇಕು. ನಾಯಿ, ಹಾವು ಸೇರಿದಂತೆ ಇತರೆ ಪ್ರಾಣಿಗಳು ಕಚ್ಚಿದವರಿಗೆ ಉಚಿತ ಪ್ರಾಥಮಿಕ ತಪಾಸಣೆ ಹಾಗೂ ಪ್ರಥಮ ಚಿಕಿತ್ಸೆ ಕಡ್ಡಾಯ ನೀಡಬೇಕು.
“ಯಾವುದೇ ಆಸ್ಪತ್ರೆ ಮುಂಗಡ ಹಣ ಕೇಳದೆ ತಕ್ಷಣ ಪ್ರಥಮ ಚಿಕಿತ್ಸೆ ನೀಡಬೇಕು” ಎಂಬುದಾಗಿ ಸುತ್ತೋಲೆಯಲ್ಲಿ ತಿಳಿಸಲಾಗಿದೆ.





