“ವಿವೇಕಾನಂದರ ಜೀವನವನ್ನು ಸ್ಪೂರ್ತಿಯಾಗಿ ಬದುಕಿನಲ್ಲಿ ಅಳವಡಿಸಿಕೊಂಡರೆ ಜೀವನ ಸಾರ್ಥಕವಾಗುವುದೆಂದು” : ನ್ಯಾ. ಜಹೀರ ಅತನೂರ

ಚಿಕ್ಕೋಡಿ :–

ಭಾರತ ದೇಶ ಜಗತ್ತಿಗೆ ಸಂಸ್ಕೃತಿ, ಪರಂಪರೆ, ಆಧ್ಯಾತ್ಮ ಹಾಗೂ ಜೀವನ ಮೌಲ್ಯಗಳನ್ನು ನೀಡಿರುವ ಶ್ರೇಷ್ಠ ದೇಶ. ಅತಿ ಹೆಚ್ಚು ಯುವ ಜನತೆಯನ್ನು ಹೊಂದಿದ ಸಂಪನ್ಮೂಲ ಭರಿತ ಯುವಶಕ್ತಿ ದೇಶದ ಮುಂದಿನ ಭವಿಷ್ಯದ ಆಧಾರ ಶಕ್ತಿಯಾಗಿದ್ದು, ವಿವೇಕಾನಂದರ ಜೀವನವನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ ಜೀವನ ಸಾರ್ಥಕವಾಗುವುದೆಂದು ಒಂದನೇ ಹೆಚ್ಚುವರಿ ದಿವಾಣಿ ನ್ಯಾಯಾಧೀಶರು ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳಾದ ನ್ಯಾ. ಜಹೀರ ಅತನೂರ ಅವರು ಹೇಳಿದರು.

ನಗರದ ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ಕೆಎಲ್ಇ ಸಂಸ್ಥೆಯ ಬಸವಪ್ರಭು ಕೋರೆ ಮಹಾವಿದ್ಯಾಲಯ, ಚಿಕ್ಕೋಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿರುವ “ರಾಷ್ಟ್ರೀಯ ಯುವ ದಿನ – 2026” ಪ್ರಯುಕ್ತ “ಕಾನೂನು ಅರಿವು – ನೆರವು ಕಾರ್ಯಕ್ರಮ” ಉದ್ಘಾಟಿಸಿ ಮಾತನಾಡಿದ ಅವರು ಇಂದಿನ ವಿದ್ಯಾರ್ಥಿಗಳು ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರು ಮತ್ತು ಶ್ರೇಷ್ಠ ಸಂತರು ನಾಡಿಗೆ ನೀಡಿದ ಕೊಡುಗೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

ಯುವ ಜನತೆ ಜೀವನದಲ್ಲಿ ಕಠಿಣ ಸವಾಲುಗಳನ್ನು ಎದುರಿಸಲು ಸದಾ ಸಕಾರಾತ್ಮಕ ಮನೋಭಾವದಿಂದ ಎಂತಹ ಸಮಸ್ಯೆಗಳನ್ನು ಕೂಡ ಮೆಟ್ಟಿ ನಿಲ್ಲುವ ಮೂಲಕ ಜವಾಬ್ದಾರಿಯುತ ಜೀವನದೊಂದಿಗೆ ಯಶಸ್ಸನ್ನು ಸಾಧಿಸಬೇಕೆಂದು ಹೇಳಿದರು.

ಅತಿಥಿ ಉಪನ್ಯಾಸವನ್ನು ನೀಡಿದ ನ್ಯಾಯವಾದಿ ಎಂ ಬಿ ಪಾಟೀಲ ಮಾತನಾಡುತ್ತಾ ಇತ್ತೀಚೆಗೆ ವಿದ್ಯಾರ್ಥಿಗಳು ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ದಾಸರಾಗುತ್ತಿರುವುದು ಅತ್ಯಂತ ಕಳವಳಕಾರಿ. ಗುರು – ಹಿರಿಯರು, ತಂದೆ – ತಾಯಿ ಜೀವನ ಮೌಲ್ಯಗಳನ್ನು ಹೇಳಿಕೊಡುವ ಎರಡು ಕಣ್ಣುಗಳಾಗಿವೆ. ವಿದ್ಯಾರ್ಥಿಗಳು ಗಾಂಭೀರ್ಯದಿಂದ ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಕರಿಸದೆ ನಮ್ಮ ದೇಶದ ಸಾಂಸ್ಕೃತಿಕ ಹಿರಿಮೆಯನ್ನು ಪಾಲಿಸುವುದು ಮುಖ್ಯ. ದುಶ್ಚಟಗಳಿಗೆ ಒಳಗಾಗಬಾರದು. ಕೇವಲ ಅಂಕ ಗಳಿಸುವುದು ಜೀವನವಲ್ಲ, ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ದೇಶದ ಅಭಿವೃದ್ಧಿಯಲ್ಲಿ ಸ್ಪಷ್ಟ ಗುರಿಯೊಂದಿಗೆ ಸಾಧನೆ ಮಾಡಬೇಕೆಂದು ಹೇಳಿದರು.

ಹಿರಿಯ ನ್ಯಾಯವಾದಿ ಹಾಗೂ ಕೆಎಲ್ಇ ಸಂಸ್ಥೆಯ ಕಾನೂನು ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿಯ ಅಧ್ಯಕ್ಷರಾದ ಎಂ ಆರ್ ಸಗರೆ ಮಾತನಾಡುತ್ತಾ ವಿವೇಕಾನಂದರ ಜೀವನ ಹಾಗೂ ಅವರ ಆದರ್ಶಗಳು ಮತ್ತು ಸಾಹಿತ್ಯ ಅಧ್ಯಯನ ಮಾಡುವುದು ಮುಖ್ಯ. ವಿದ್ಯಾರ್ಥಿಗಳು ಶಿಸ್ತು ಮತ್ತು ಸಮಾಜದಲ್ಲಿ ಯಶಸ್ಸನ್ನು ಸಾಧಿಸುವ ನಿಟ್ಟಿನಲ್ಲಿ ಸತತ ಪ್ರಯತ್ನ ಮಾಡಿದಲ್ಲಿ ಯಶಸ್ಸು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿರುವ ಪದವಿ ಪ್ರಾಚಾರ್ಯ ಡಾ ಬಿ ಜಿ ಕುಲಕರ್ಣಿ ಮಾತನಾಡುತ್ತಾ ವಿದೇಶಗರು ಭಾರತೀಯರ ಬಗ್ಗೆ ತಾಳಿದ ತಪ್ಪು ಕಲ್ಪನೆಯನ್ನು ಹೋಗಲಾಡಿಸಲು ವಿವೇಕಾನಂದರು ಮಾಡಿದ ಚಿಕಾಗೋ ಭಾಷಣ ಅರಿವು ಮೂಡಿಸಿತು. ಸಂವಿಧಾನದ ಅರಿವು ಮತ್ತು ಕಾನೂನಿನ ಅರಿವು ಪ್ರತಿಯೊಬ್ಬರು ತಿಳಿದುಕೊಳ್ಳುವುದು ಅವಶ್ಯಕ ಎಂದು ಹೇಳಿದರು

ಈ ಕಾರ್ಯಕ್ರಮದಲ್ಲಿ ಪದವಿಪೂರ್ವ ಪ್ರಾಚಾರ್ಯ ಪ್ರಕಾಶ ಕೋಳಿ, ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷರಾದ ಶ್ರೀನಿವಾಸ ಹರಕೆ, ಬಸವರಾಜ ಮಠಪತಿ, ಕಾರ್ಯದರ್ಶಿಗಳಾದ ಆರ್ ಬಿ ಹಿತ್ತಲಮನಿ, ಐಕ್ಯುಎಸಿ ಸಂಯೋಜಕರಾದ ಡಾ.ವಿನಾಯಕ ಮಂಜಲಾಪೂರ, ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಡಿ ಬಿ ಸೋಲಾಪುರೆ ಮತ್ತಿತರರು ಉಪಸ್ಥಿತರಿದ್ದರು.

ಪದ್ಮಶ್ರೀ ಚೌಗಲಾ ಪ್ರಾರ್ಥಿಸಿದರು, ಡಾ. ವಿನಾಯಕ್ ಮಂಜಲಾಪೂರ ಸ್ವಾಗತಿಸಿದರು, ಸಿದ್ದಣ್ಣ ನಾಯಕ. ನಿರೂಪಿಸಿದರು. ಮಹೇಶ ಮದಬಾವಿ ವಂದಿಸಿದರು.

Share this post:

Leave a Reply

Your email address will not be published. Required fields are marked *

Category
Lorem ipsum dolor sit amet, consectetur adipiscing elit eiusmod tempor ncididunt ut labore et dolore magna

You cannot copy content of this page