ಚಿಕ್ಕೋಡಿ :–
ತಾಲೂಕು ಪಂಚಾಯಿತಿ ಜಮಾಬಂದಿಯು ವಾರ್ಷಿಕ ಆದಾಯ, ವೆಚ್ಚ, ಮತ್ತು ಆಸ್ತಿಗಳ ಭೌತಿಕ ಹಾಗೂ ಆರ್ಥಿಕ ಪರಿಶೀಲನೆಯನ್ನು (ಲೆಕ್ಕಪರಿಶೋಧನೆ) ಒಳಗೊಂಡಿರುವ ಒಂದು ಪ್ರಮುಖ ಸರ್ಕಾರಿ ಪ್ರಕ್ರಿಯೆಯಾಗಿದೆ. ಇದು ಪಾರದರ್ಶಕತೆಗಾಗಿ ನಡೆಸುವ ವಾರ್ಷಿಕ ಆಡಿಟ್ ಆಗಿದ್ದು, ಲೆಕ್ಕಗಳು, ದಾಖಲೆಗಳು ಮತ್ತು ಅನುಷ್ಠಾನಗೊಂಡ ಕಾಮಗಾರಿಗಳನ್ನು ಪರಿಶೀಲನೆ ಮಾಡಲಾಗುವುದೆಂದು ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿಗಳಾದ (ಅಭಿವೃದ್ದಿ) ಬಸವರಾಜ ಅಡವಿಮಠ ರವರು ಹೇಳಿದರು.

ಚಿಕ್ಕೋಡಿ ತಾಲ್ಲೂಕು ಪಂಚಾಯಿತಿಯ 2024-25ನೇ ಸಾಲಿನ ವಿವಿಧ ಸರ್ಕಾರಿ ಇಲಾಖೆಗಳ ವೇತನ ಹಾಗೂ ಇತರ ವಿಭಾಗಗಳ ಖರ್ಚು ವೆಚ್ಚಗಳ ಕುರಿತು ಜಮಾಬಂದಿಯಲ್ಲಿ ಚರ್ಚಿಸಿದರು. ಹಾಗೂ ಕುಡಿಯುವ ನೀರು, ರಸ್ತೆ ಸಂಪರ್ಕ ಮತ್ತು ಶಾಲಾ ಕೊಠಡಿಗಳ ನಿರ್ಮಾಣದ ಬಗ್ಗೆ ಮಾಹಿತಿಯನ್ನು ಪಡೆದರು ಹಾಗೂ ಆರೋಗ್ಯ ಇಲಾಖೆಯಲ್ಲಿ ಔಷಧಗಳ ಲಭ್ಯತೆಯ ಬಗ್ಗೆಯೂ ವಿಚಾರಿಸಿದರು. ತಾಲ್ಲೂಕು ಪಂಚಾಯತಿಯ ಅನಿರ್ಬಂಧಿತ ಅನುದಾನ ಹಾಗೂ ಲಿಂಕ್ ಡಾಕ್ಯುಮೆಂಟ್ ಅನುದಾನವನ್ನು ನಿಗದಿತ ಸಮಯದೊಳಗೆ ಸಮರ್ಪಕವಾಗಿ ಖರ್ಚು ಮಾಡಿ ಪ್ರಗತಿ ಸಾಧಿಸಬೇಕೆಂದು ಬಸವರಾಜ್ ಅಡವಿಮಠ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ, ಕಾರ್ಯನಿರ್ವಾಹಕ ಅಧಿಕಾರಿಗಳಾದ ರವಿಕುಮಾರ ಹುಕ್ಕೇರಿ, ಸಹಾಯಕ ನಿರ್ದೇಶಕರು (ಗ್ರಾಉ) ಶಿವಾನಂದ ಶಿರಗಾಂವಿ, ಸಹಾಯಕ ನಿರ್ದೇಶಕರು (ಪಂ.ರಾ) ಮೆಹಬೂಬ ಕೋತವಾಲ, ತಾಲೂಕ ಪಂಚಾಯತಿಯ ಯೋಜನಾಧಿಕಾರಿಗಳಾದ ಶ್ರೀಮತಿ ರೇಖಾ ಮೇತ್ರಿ, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ರಾಜೇಂದ್ರ ಖಣದಾಳೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಅರ್ಚನಾ ಸಾನೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.





