ಯವ್ವಾ ಬ್ಯಾಡಬೆ….ಬುತ್ತಿ ಕಟ್ಟ ಬ್ಯಾಡ…ನೀ ಕಟ್ಟು ಬುತ್ತಿ ನೋಡಿ ನನ್ನ ದೊಸ್ತರೆಲ್ಲ ನಗಲಾಕ್ ಹತ್ಯಾರು

ಬದುಕಿನ ಬುತ್ತಿ ಖಾಲಿ ಆಗುತ್ತಿರುವ ಈ ದಿನಗಳಲ್ಲಿ

ಯವ್ವಾ ಬ್ಯಾಡಬೆ….ಬುತ್ತಿ ಕಟ್ಟ ಬ್ಯಾಡ…ನೀ ಕಟ್ಟು ಬುತ್ತಿ ನೋಡಿ ನನ್ನ ದೊಸ್ತರೆಲ್ಲ ನಗಲಾಕ್ ಹತ್ಯಾರು….ಕಟಕ್ ರೊಟ್ಟಿ ಖಾರಬ್ಯಾಳಿ ಅಗಸಿ ಹಿಂಡಿ ಕೆಂಪ ಮೆನಸಿನಕಾಯಿ ಖಾರ ಮೂಕನಿ ಕಾಳ ಉಸಳಿ ಹಿಂಗೆಲ್ಲ ಕಟ್ಟಿರತಿ….ಅಲ್ಲೆ ಎಲ್ಲೆರೆ ಮೊಸರ್ ತಗೊಂಡು ತಿನ್ನು ಅಂತಿ….ಇಲ್ಲಂದ್ರ ಮೊಸರನ್ನ ಮಾಡಿ ಕಟ್ಟಿರತಿ ಅದು ಹುಳಿ ವಾಸನಿ ಬರತೈತಿ…ಎಲ್ಲಾರೂ ಅವ್ವಾ ಬುತ್ತಿ ಕಟ್ಯಾಳ ಎನ್ ಅನಕೊಂತ ಬಂದು ತಾಂವ…… ಎಲ್ಲರೂ ತಿಂದ್ ಖಾಲೆ ಮಾಡ್ತಾರು ಅನ್ನುತ್ತಿದ್ದ ಮಲ್ಲಪ್ಪನಿಗೆ ಅಯ್ಯ ನನ್ ಮಗನ ಮಲ್ಯಾ…ತಿನ್ಲಿ ಬಿಡು ಬೆಳೆಯು ಹುಡುಗುರು ಅವು ಇನ್ನೊಂದ್ ನಾಕ್ ರೊಟ್ಟಿ ಹೆಚ್ಚ ಬಡಿತಿನಿ ನನ್ನ ರಟ್ಟಿ ಇನ್ನ ಗಟ್ಟಿ ಅದಾವು ಅಂದಳು ಬಾಳವ್ವ….ಅವ್ವನ ಧನಿ ಕೇಳಿದಂತಾಗಿ ದಡಕ್ಕನೆ ಎದ್ದು ಕುಳಿತ ಮಲ್ಲಪ್ಪ ಶೆಟ್ಟಿ…

ಈಗ ಅದೆಲ್ಲ ಎಲ್ಲಿಯ ಮಾತು,ತಪ್ಪಲ ಸಹಿತ ರೊಟ್ಟಿ ಬುತ್ತಿಯ ಜೊತೆಗೆ ಇರುತ್ತಿದ್ದ ಎಳೆ ಈರುಳ್ಳಿ, ರೊಟ್ಟಿ ಕತ್ತರಿಸುವಾಗಲೆ ಈಗಿನ ಸಲಾಡಿನಂತೆ ಇಡಿಯಾಗಿ ಕತ್ತರಿಸುತ್ತಿದ್ದ ಮೂಲಂಗಿ,ಸವತೆ ಕಾಯಿ,ಹಸಿ ಮೆನಸಿನ ಕಾಯಿ,ಹಾತರಕಿ ಪಲ್ಯ ಮತ್ತು ಮೆಂತ್ಯದ ಸೊಪ್ಪು…ಅಪರೂಪಕ್ಕೆ ಯಾವುದೊ ಹೊಟೆಲಿನಿಂದ ತಂದ ಎರಡು ಲಿಟರ್ ಮೆರಿಂಡಾ ಅಥವಾ ಪೆಪ್ಸಿಯ ಖಾಲಿ ಬಾಟಲಿ ತಂದು ಸ್ವಚ್ಛವಾಗಿ ತೊಳೆದು ತಟ್ಟಿನ ಕವರು ಹೆಣೆದು ಹಿಡಿಕೆ ಮಾಡಿ ಕಿಬ್ಬೊಟ್ಟೆಯ ಕರುಳುಗಳು ಹಸಿವು ಅಂತ ಚುರುಗುಟ್ಟಿದಾಗೆಲ್ಲ ಅಲ್ಲೇ ಎಲ್ಲೋ ಒಂದು ಕಡೆ ನೆರಳು ಹುಡುಕಿಕೊಂಡು ಗಿಡಮರಗಳ ಕೆಳಗೆ ಅಥವಾ ಯಾವುದೋ ಕಟ್ಟೆಯ ಮೇಲೆ ಕುಳಿತುಕೊಂಡು ಊಟ ಮಾಡಿ ನೀರು ಕುಡಿದು ಬದುಕು ಕಳೆಯುತ್ತಿದ್ದ ದಿನಗಳವು.

ಬಾರೋ ಬೀರಪ್ಪ ಅವ್ವ ಬುತ್ತಿ ಕಳಸ್ಯಾಳ,ಅಂತ ಗೆಳೆಯನೊಬ್ಬ ತನ್ನ ಖಾಸಾ ಗೆಳೆಯನನ್ನ ಊಟಕ್ಕೆ ಕರೆಯುತ್ತಿದ್ದ ದಿನಗಳಿಂದ ಹಿಡಿದು ಕೆಂಪು ಬಸ್ಸು ಬರುವದನ್ನೆ ಕಾಯುತ್ತ ನಿಂತು ಬುತ್ತಿಯ ಚೀಲ ಕೊಡುವ ಕೆ ಎಸ್ ಆರ್ ಟಿಸಿ ಡ್ರೈವರ್ರುಗಳು ಏ ತಮ್ಮ ಚಂದಂಗಿ ಓದಿ ಊರಿಗಿ ಹೆಸರು ತರಬೇಕು ನೋಡು ನಾನು ಅಲ್ಲೆ ನಿಮ್ಮ ಊರ ಮಗ್ಗಲಾಂವ ಅದಿನಿ ಮನಿಯವರಿಗಿ ಎನರೆ ಹೇಳುದ್ ಐತೆನು,ಖರ್ಚಿಗಿ ರೊಕ್ಕ ಅದಾವ್ ಇಲ್ಲೊ ಅನ್ನುತ್ತ ಯಾವ ಅಪೇಕ್ಷೆಗಳು ಇಲ್ಲದೆ ಒಂದಷ್ಟು ದುಡ್ಡು ಕೈಗಿಟ್ಟು ಬುದ್ದಿ ಹೇಳುತ್ತಿದ್ದ ದಿನಗಳವು.

ಈಗೆಲ್ಲ ಪಾರ್ಸಲ್ ಅಂತ ಯಾರಾದರು ಇಡಲು ಹೋದಾಗ ಏನೈತಿ ಅದ್ರಾಗ…. ಅನ್ನುವ ಬಣ್ಣ ಬದಲಿಸಿದ ಅದೆ ಕೆ ಎಸ್ ಆರ್ ಟಿ‌ಸಿ ಬಸ್ಸಿನ ಹೊಸ ತಲೆಮಾರಿನ ಚಾಲಕ ಅಥವಾ ನೀರ್ವಾಹಕರು ಬುತ್ತಿ ಐತ್ರಿ ಸರ್ ಅನ್ನುತ್ತಿದ್ದಂತೆಯೆ ಆತ್ ಇಡಲ್ಲಿ ಅನ್ನುತ್ತ ಯಾವುದೋ ಊರಿನ ಹೆತ್ತ ಕರುಳೊಂದು ಪ್ರೀತಿ ಮತ್ತು ಮಗನ ಮೇಲಿನ ಕಕ್ಕುಲತೆಯಿಂದ ಕಟ್ಟಿದ ಬುತ್ತಿಯನ್ನ ಕೈಯಿಂದ ಮುಟ್ಟಲು ಕೂಡ ಹಿಂದೇಟು ಹಾಕುವ ಮತ್ತು ವಿಷಾದವಾಗಿ ನಗುವ ದಿನಗಳಿವು.

ಕಾರಣ ಮನುಷ್ಯನಲ್ಲಿ ಬೆಳೆಯುತ್ತಿರುವ ಸ್ವಾರ್ಥದ ಮನೋಭಾವನೆ ಮತ್ತು ಮೊಬೈಲ್ ಬಂದಾಗಿನಿಂದ ಪೋನ್ ಪೆ ಗೆ ಬೀಳುವ ಹಣ ಹಾಗೂ ಉಳ್ಳವರು ಪಾರ್ಸಲ್ ಇಡುವಾಗ ಕೊಡುವ ಚಿಲ್ಲರೆ ಕಾಸು ಅಂದರೆ ಬಹುಶಃ ತಪ್ಪಾಗಲಿಕ್ಕಿಲ್ಲ.

ಹೈಸ್ಕೂಲು,ಕಾಲೇಜುಗಳ ಸೌಕರ್ಯವಿಲ್ಲದ ಹಳ್ಳಿಗಳಿಂದ ಹೊರಟ ಹುಡುಗರು
ಶಹರುಗಳಲ್ಲಿ ಶಾಲೆ ಕಾಲೇಜು ಕಲಿಯಲು ಹೋದಾಗೆಲ್ಲ ಎರಡು ಮೂರು ದಿನಗಳಿಗೊಮ್ಮೆ ಬಸ್ಸಿಗೆ ಊಟದ ಬುತ್ತಿಯನ್ನು ಇಟ್ಟು ಕಳಿಸುತ್ತಿದ್ದ ದಿನಗಳು ಹೇಗೆ ನಮ್ಮ ಬಾಲ್ಯದ ಸ್ವಚ್ಛಂದವಾದ ದಿನಗಳನ್ನು ನಾವು ಕಳೆದುಕೊಂಡಿದ್ದೆವೋ ಹಾಗೆಯೇ ಒಂದಷ್ಟು ಸುಮಧುರ ಕ್ಷಣಗಳನ್ನು ಕೂಡ ನಾವು ನೀವೆಲ್ಲ ಕಳೆದುಕೊಂಡಿದ್ದೇವೆ.

ಹೀಗೆಲ್ಲಾ ಊರು ಕೇರಿ ಹಳ್ಳಿ ಶಹರು ಹೀಗೆ ಎಲ್ಲ ಕಡೆಯೂ ಹೋಟೆಲ್ ದಾಬಾ ರೆಸ್ಟೋರೆಂಟ್ ಚೈನೀಸ್ ಪಾಸ್ಟ್ ಫುಡ್, ಮಿನಿ ಮೀಲ್ಸ್, ಹೀಗೆ ತರ ಹೇವರಿ ನಾಲಿಗೆ ರುಚಿಯ ತಿನಿಸುಗಳು ಮತ್ತು ನೀವು ಹೇಳಿದ ಕೆಲ ಕ್ಷಣಗಳಲ್ಲೇ ನೀವು ಕುಳಿತ ಟೇಬಲ್ಲಿನ ಮೇಲೆ ತಂದು ಇಡುವ ದಿನಗಳಿವು.

ಮನಸೊರೆಗೊಳ್ಳುವಂತೆ ಬಣ್ಣ,ರುಚಿ,ಸುವಾಸನೆ ಹೊತ್ತ ಖಾದ್ಯಗಳ ನಡುವೆ ಅವ್ವ ಪ್ರೀತಿಯಿಂದ ಕಟ್ಟುತ್ತಿದ್ದ ಬುತ್ತಿ ಈಗಿನ ಮಕ್ಕಳಿಗೆ ಭಾರ ಅನ್ನಿಸುತ್ತದೆ.ಮನೆ ಊಟ ಅಂದ ತಕ್ಷಣ ಗೆಳೆಯರು ಮೂಗು ಮುರಿಯುವ ಮತ್ತು ಕಂಜ್ಯೂಸ್ ಅನ್ನುವ ಪಟ್ಟ ಕಟ್ಟಿ ದೂರ ಹೋಗುವ ದಿನಗಳ ನಡುವೆ ನಾವಿದ್ದೇವೆ.

ಲಿಂಗಾಯತ ಖಾನಾವಳಿ,ಉಡುಪಿ ದರ್ಶಿನಿ,ಮುಲ್ಲಾ ಧಾಭಾ,ಹೀಗೆ ಅವರವರ ಜಾತಿ,ಧರ್ಮ,ಉಪಜಾತಿಗಳನ್ನ ಎತ್ತಿ ತೋರಿಸುವ ಹೆಸರಿನ ಹೋಟೆಲ್ ಗಳಿಂದ ಹಿಡಿದು ನಾವು ಇಲ್ಲಿಯವರೆಗೂ ಕೇಳಿಯೇ ಇರದ ಇಂಗ್ಲೀಷಿನ ಹೆಸರು ಹೊತ್ತ ಥ್ರಿ ಸ್ಟಾರ್,ಫೈವ್ ಸ್ಟಾರ್ ಹೋಟೆಲ್ ಗಳತನಕ ಮತ್ತು ನಾರ್ಥ ಇಂಡಿಯನ್,ಸೌಥ್ ಇಂಡಿಯನ್ ಡಿಶ್ ಅನ್ನುವ ತರಹೇವಾರಿ ಖಾದ್ಯ,ಸ್ವೀಟು,ಐಸ್ಕ್ರೀಮ್ ಗಳ ಜೊತಗೆ ಬರುವ ಡಿಶ್ಶುಗಳ ತನಕ ಅದು ಯಾವಾಗಲೋ ಬದಲಾವಣೆ ಅನ್ನುವದು ನಮ್ಮ ನಿಮ್ಮೆಲ್ಲರ ನಡುವೆ ಹಾಸು ಹೊಕ್ಕಾಗಿ ಹೋಗಿದೆ.

ಭೌಗೋಳಿಕವಾಗಿ ಅಲ್ಲಿನ ವಾತಾವರಣಕ್ಕೆ ತಕ್ಕಂತೆ ಅಲ್ಲಿಯ ಜನರು ಉಣ್ಣುವ ಊಟ ಈಗ ಎಲ್ಲೆಡೆ ಲಭ್ಯವಾಗುತ್ತ ನಾಲಿಗೆಯ ರುಚಿಗೆ ಏನೇನೋ ತಿಂದು ಉದರವ್ಯಾಧಿಯಿಂದ ಬಳಲುವ ಮತ್ತು ಅನ್ನದಲ್ಲಿ ಬೆರೆತ ಸೋಡಾ,ಟೆಸ್ಟಿಂಗ್ ಪೌಡರ್,ಅಜಿನೋಮೋಟೊ,ದಂತಹ ರಾಸಾಯನಿಕಗಳು ತಡವಾಗಿ ಆದರೂ ನಮ್ಮ ಮೇಲೆ ಬೀರಬಹುದಾದ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಹೊರಟರೆ ನಕ್ಕು ಸುಮ್ಮನಾಗುವ ಜನರಿಂದ ಹಿಡಿದು ಅಯ್ಯೋ ಬಿಡಿ ಸಾರ್ ನಾವೆನು ಇಲ್ಲಿ ಪರ್ಮನೆಂಟಾಗಿ ಇರ್ತಿವಾ ಈಗೆಲ್ಲ ಮೂವತ್ತು ನಲವತ್ತಕ್ಕೆ ಹೊಗೆ ಹಾಕೊಳ್ತಾ ಇಲ್ವಾ ಅನ್ನುವ ಉಢಾಪೆಯ ಮಾತನಾಡುವ ಜನರ ನಡುವೆ ನಾವಿದ್ದೇವೆ.

ಬದಲಾದ ಆಹಾರ ಶೈಲಿ,ಕೆಲಸದ ಒತ್ತಡ,ಬದಲಾಗುತ್ತಿರುವ ವಾತಾವರಣ,ಹೆಚ್ಚುತ್ತಿರುವ ಭೂಮಿಯ ತಾಪಮಾನ,ಮಲೀನಗೊಳ್ಳುತ್ತಿರುವ ಗಾಳಿ,ನೀರು ಎಲ್ಲವುಗಳ ಬಗ್ಗೆ ದಿವ್ಯ ನಿರ್ಲಕ್ಷ್ಯ ಮನುಷ್ಯನ ಆಯುಷ್ಯವನ್ನೆ ಕಸಿಯುತ್ತಿವೆ.ಕಂಡ ಕಂಡ ಊರುಗಳಲ್ಲಿ ಅಥವಾ ಕೆಲಸದ ನಿಮಿತ್ಯ ಒಂದು ಊರಿನಿಂದ ಇನ್ನೊಂದು ಊರಿಗೆ ಹೋದಾಗ ಬ್ರದರ್ ಒನ್ ಲೀಟರ್ ವಾಟರ್ ಅನ್ನುತ್ತ ಕಾಸು ಕೊಟ್ಟು ಕುಡಿಯುವ ಪ್ಲಾಸ್ಟಿಕ್ ಬಾಟಲಿಯೊಳಗಿನ ನೀರು ನೂರೆಂಟು ಕಂಪನಿಗಳು ಸೆಟ್ ಮಾಡಿರುವ ಬೇರೆ ಬೇರೆ ಟಿಡಿಎಸ,ಪಿಲ್ಟರ್ ಮತ್ತು ಸೇರಿಸಿರುವ ಕೃತಕ ಮಿನರಲ್ ಹಾಗೂ ಪ್ಯಾಕೆಜ್ ಆಗುವಾಗ ನೀರಿನೊಂದಿಗೆ ಬೆರೆತ ಪ್ಲಾಸ್ಟಿಕ್ ಅಂಶಗಳು ಮನುಷ್ಯನ ಆರೋಗ್ಯ ಕಾಯುವ ಬದಲು ಕ್ಯಾನ್ಸರ್ ಕಾರಕವಾಗಿ ಮಾರ್ಪಟ್ಟಿದ್ದರೂ ಶುದ್ಧ ಅನ್ನುವ ಭ್ರಮೆಯಲ್ಲಿ ಉಚಿತವಾಗಿ ಸಿಗುವದನ್ನೂ ಕಾಸು ಕೊಟ್ಟು ಕುಡಿಯುವ ಹಂತ ತಲುಪಿದ್ದೇವೆ.

ಸಾರ್ವಜನಿಕ ಸಾರಿಗೆ ಇಲ್ಲದ ಮತ್ತು ಬಸ್ಸು ಬಾರದ ಹಳ್ಳಿಗಳ ಅದೆಷ್ಟೋ ಜನ ಆಗಿನ ಕಾಲದಲ್ಲಿ ನಡೆದುಕೊಂಡು ಅಥವಾ ಸೈಕಲ್ಲಿನ ಮೇಲೆ ಪರ ಊರುಗಳಿಗೆ ಹೋಗುವಾಗ ಬುತ್ತಿ ಮತ್ತು ನೀರು ಕಡ್ಡಾಯವಾಗಿ ಜೊತೆಯಾಗುತ್ತಿದ್ದವು.ಚಿಗವ್ವ ರಾಮಣ್ಣ ಕಾಕಾ ಊರಾಗ ಇಲ್ಲೆನು ಅನ್ನುವ ಮಾತುಗಳು ಆ ದಿನ ನಸುಕಿನ ಜಾವ ಬೇಗನೆ ಎದ್ದು ರೊಟ್ಟಿ ತಟ್ಟಿದ ಶಬ್ದದಿಂದಲೆ ಮತ್ತೊಬ್ಬರಿಗೆ ತಿಳಿದು ಹೋಗುತ್ತಿದ್ದ ದಿನಗಳವು.

ಈಗೆಲ್ಲ ಜಸ್ಟ್ ಎ ಮಿನಿಟ್ ಅನ್ನುವ ಪುಡ್ ಪಾರ್ಸಲ್ ಮತ್ತು ಮೇಡ್ ಇನ್ ಮಿನಿಟ್ ಅನ್ನುವ ಖಾದ್ಯಗಳು ಒಂದು ಕಡೆ ಜೇಬು ಖಾಲಿ ಆಗಿಸಿದರೆ ಇನ್ನೊಂದು ಕಡೆ ಮನುಷ್ಯರನ್ನ ನಿಶ್ಯಕ್ತ,ಮತ್ತು ನಿಸ್ತೇಜರನ್ನಾಗಿಸುತ್ತ ಇರುವದರ ಹಿಂದೆ ಮಾಯವಾಗುತ್ತಿರುವ ಮನೆ ಊಟದ ಬುತ್ತಿಗಳೂ ಕಾರಣ ಅನ್ನುವದು ನನ್ನ ಅಭಿಪ್ರಾಯ.

ದೀಪಕ ಶಿಂಧೆ
9482766018

Share this post:

Leave a Reply

Your email address will not be published. Required fields are marked *