ಕಾಶ್ಮೀರದಲ್ಲಿ ಭಯೋತ್ಪಾದಕರು ಅಮಾಯಕರ ಹತ್ಯೆ ಮಾಡಿದಾಗ ಒಬ್ಬ ಪೊಲೀಸ್‌ ಕೂಡ ಅಲ್ಲಿರಲಿಲ್ಲ ಇದು ಕೇಂದ್ರ ಸರ್ಕಾರದ ಭದ್ರತಾ ಲೋಪ : ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಳಗಾವಿ :–

ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಮತ್ತು ‘ಸಂವಿಧಾನ ರಕ್ಷಿಸಿ ದೇಶ ಉಳಿಸಿ’ ಆಂದೋಲನದ ಅಂಗವಾಗಿ ಎಪಿಸಿಸಿ, ಕೆಪಿಸಿಸಿ ವತಿಯಿಂದ ನಗರದಲ್ಲಿ ಸೋಮವಾರ ಆಯೋಜಿಸಿದ್ದ ಬೃಹತ್‌ ಪ್ರತಿಭಟನಾ ಸಮಾವೇಶದಲ್ಲಿ ಅವರು ಮಾತನಾಡಿದರು.

ಕಾಶ್ಮೀರದಲ್ಲಿ ಭಯೋತ್ಪಾದಕರು ಅಮಾಯಕರ ಹತ್ಯೆ ಮಾಡಿದಾಗ ಒಬ್ಬ ಪೊಲೀಸ್‌ ಕೂಡ ಅಲ್ಲಿರಲಿಲ್ಲ. ಇದು ಕೇಂದ್ರ ಸರ್ಕಾರದ ಭದ್ರತಾ ಲೋಪ. ಲೋಪ ಮರೆಮಾಚಲು ನನ್ನ ಹೇಳಿಕೆ ತಿರುಚುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಪಾಕಿಸ್ತಾನ ವಿರುದ್ಧ ಯುದ್ಧ ಮಾಡುವುದೇ ಬೇಡವೆಂದು ನಾನು ಹೇಳಿಲ್ಲ. ಅನಿವಾರ್ಯ ಪರಿಸ್ಥಿತಿ ಬಂದರೆ ಯುದ್ಧ ಮಾಡಲೇಬೇಕಾಗುತ್ತದೆ.

ಆದರೆ, ಕೇಂದ್ರ ಸರ್ಕಾರದವರು ಭಯೋತ್ಪಾದಕರನ್ನು ಮಟ್ಟ ಹಾಕುವುದನ್ನು ಬಿಟ್ಟು, ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ನನ್ನ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿರುವುದು ಸರಿಯಲ್ಲ.

ದೇಶದ ಅಖಂಡತೆ, ಸಾರ್ವಭೌಮತೆಗೆ ಧಕ್ಕೆ ಬಂದರೆ ಎದುರಿಸಲು ಸಿದ್ಧರಿದ್ದೇವೆ’ ಎಂದರು.

‘ಕೇಂದ್ರ ಗುಪ್ತಚರ ವಿಭಾಗ ಮತ್ತು ಭದ್ರತಾ ವ್ಯವಸ್ಥೆ ಏನು ಮಾಡುತ್ತಿದೆ? ಇದು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಅವರ ವಿಫಲತೆ ಅಲ್ಲವೇ? ನಮಗೆ ರಕ್ಷಣೆ ನೀಡುವಲ್ಲಿ ವಿಫಲ ಆಗಿರುವುದನ್ನು ಭಾರತೀಯರಾದ ನಾವು ಪ್ರಶ್ನಿಸಬಾರದೇ ಎಂದು ವಾಗ್ದಾಳಿ ನಡೆಸಿದರು.

‘ನಮ್ಮ ಪ್ರತಿಭಟನಾ ಸಮಾವೇಶಕ್ಕೇ ನುಗ್ಗಿದ ಬಿಜೆಪಿಯವರು ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ್ದಾರೆ. ಇಂಥ ಬೆದರಿಕೆಗೆ ನಾನು ಜಗ್ಗಲ್ಲ, ಬಗ್ಗಲ್ಲ. ನಮ್ಮ ಕಾರ್ಯಕರ್ತರಿಗೂ ಶಕ್ತಿ ಇದೆ’ ಎಂದು ಬಿಜೆಪಿ ಪ್ರತಿಭಟನಾಕಾರರ ವಿರುದ್ಧ ಗುಡುಗಿದರು.

ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದನ್ನು ಮರೆಮಾಚಲು ಬಿಜೆಪಿಯವರು ಕಾಂಗ್ರೆಸ್‌ ವಿರುದ್ಧ ಜನಾಕ್ರೋಶ ಯಾತ್ರೆ ಮಾಡುತ್ತಿದ್ದಾರೆ. ಜನರಿಗೆ ಸತ್ಯ ತಿಳಿಸಲು ನಾವು ಪ್ರತಿಭಟನಾ ಸಮಾವೇಶ ಮಾಡುತ್ತಿದ್ದೇವೆ’ ಎಂದರು.

ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ, ಎಚ್‌.ಸಿ.ಮಹದೇವಪ್ಪ, ಎಚ್‌.ಕೆ.ಪಾಟೀಲ, ಎಂ.ಬಿ.ಪಾಟೀಲ, ಕೆ.ಎಚ್‌.ಮುನಿಯಪ್ಪ ನೇತೃತ್ವ ವಹಿಸಿದ್ದರು.

Share this post:

Leave a Reply

Your email address will not be published. Required fields are marked *