ಚಿಕ್ಕೋಡಿ :–
“ನಾರಿ ಶಕ್ತಿ ಉನ್ನತ ಸ್ಥಾನದಲ್ಲಿದೆ. ಸೃಷ್ಟಿಯ ಮೂಲ ಹೆಣ್ಣು. ಹೆಣ್ಣನ್ನು ದೇವರಿಗೆ ಹೋಲಿಕೆ ಮಾಡಲಾಗುತ್ತದೆ. ಹೆಣ್ಣು ದೇವರುಗಳನ್ನು ಪೂಜಿಸಲಾಗುತ್ತದೆ ಆದರೆ ಹೆಣ್ಣು ಮಕ್ಕಳಿಗೆ ಇಲ್ಲಿ ರಕ್ಷಣೆ ಇಲ್ಲ” ಎಂದು ಸಖಿ ಒನ್ ಸಿಬ್ಬಂದಿ ರೂಪ ಶಿಂತ್ರೆ ಕಳವಳ ವ್ಯಕ್ತಪಡಿಸಿದರು.

ಕ್ರಾಸ್ ಮತ್ತು ಬಿಡಿಎಸ್ಎಸ್ ಸಂಸ್ಥೆಯ ಸಹಯೋಗದಲ್ಲಿ ಮಹಿಳಾ ಸಬಲೀಕರಣ ಯೋಜನೆ ಕಾರ್ಯಕ್ರಮದಲ್ಲಿ ಮಾತನಾಡಿದರು ” ಭ್ರೂಣ ಹತ್ಯೆ ತಡೆಯಲು ಕಾಯ್ದೆ ಬಂದಿದ್ದರೂ ಕೂಡ ಇವತ್ತಿಗೂ ಎಲ್ಲೆಲ್ಲೋ ಹೆಣ್ಣು ಭ್ರೂಣ ಲಿಂಗ ಹತ್ಯೆ ನಡೆಯುತ್ತಿದೆ. ಹೀಗಾಗಿ ಹೆಣ್ಣು ಮಕ್ಕಳ ಸಂಖ್ಯೆ ಇಂದಿಗೂ ಕೂಡ ಗಂಡಸರಷ್ಟು ಸಮವಾಗಿಲ್ಲ.ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಹೆಣ್ಣು ಮಕ್ಕಳ ರಕ್ಷಣೆ ಮತ್ತು ಪ್ರೋತ್ಸಾಹಕ್ಕೆ ಸಾಕಷ್ಟು ಕಾನೂನು ಮತ್ತು ಯೋಜನೆಗಳನ್ನು ತಂದಿದ್ದರೂ ಕೂಡ ಪುರುಷ ಪ್ರಧಾನ ಸಮಾಜ ಮತ್ತು ಕೆಲವು ಸಂಪ್ರದಾಯಗಳು ಮಹಿಳೆಯರನ್ನು ಮುನ್ನೆಲೆಗೆ ತರಲು ಹಿಂದೇಟು ಹಾಕುತ್ತಿವೆ” ಎಂದರು.

ಸಖಿ ಒನ್ ಸಿಬ್ಬಂದಿ ರಾಜಶ್ರೀ ಪಾಟೀಲ್ ರವರು” ಬಾಲ್ಯ ವಿವಾಹ ತಡೆ, ಪೋಕ್ಸೋ, ಒಳ್ಳೆಯ ಮತ್ತು ಕೆಟ್ಟ ಸ್ಪರ್ಶ, ವರದಕ್ಷಿಣೆ ಕಿರುಕುಳ ಕಾಯ್ದೆ ಮತ್ತು ಪೋಶ್ ಕಾಯ್ದೆಗಳು ಮಹಿಳಾಪರವಾಗಿವೆ ಆದರೆ ಅವುಗಳ ಅನುಷ್ಠಾನ ಮಾಡುವಲ್ಲಿ ಈ ಸಮಾಜ ಸೋತಿದೆ. ಪ್ರತಿ ಬಾರಿ ಮಹಿಳೆಯರನ್ನೇ ತಪ್ಪಿತಸ್ಥರನ್ನಾಗಿ ನಿಲ್ಲಿಸಲಾಗುತ್ತದೆ. ಹೀಗಾಗಿ ಕಾಯ್ದೆಗಳು ಕಟ್ಟು ನಿಟ್ಟಾಗಿ ಜಾರಿಗೆ ಬರಬೇಕು. ಮಹಿಳೆಯರೆಲ್ಲರೂ ಜಾಗೃತರಾಗಬೇಕು” ಎಂದರು.
ಬಿಡಿಎಸ್ಎಸ್ ಸಂಸ್ಥೆ ನಿರ್ದೇಶಕರಾದ ಫಾದರ್ ಪೀಟರ್ ಆಶೀರ್ವಾದಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ” ಸ್ವಾತಂತ್ರ್ಯ ಸಂಭ್ರಮದ ಸುವರ್ಣ ಸಂಭ್ರಮದಲ್ಲಿದ್ದೇವೆ. ಮಹಿಳೆಯರಿಗೆ ಸ್ವಾತಂತ್ರ್ಯ ದೊರೆತಿಲ್ಲ. ಎಲ್ಲಿ ನೋಡಿದರಲ್ಲಿ ಅತ್ಯಾಚಾರ, ಗ್ಯಾಂಗ್ ರೇಪ್ ಮತ್ತು ಮಹಿಳಾ ದೌರ್ಜನ್ಯಗಳು ನಡೆಯುತ್ತಿವೆ ಹೀಗಾಗಿ ಮಹಿಳೆಯರು ತಮ್ಮ ಪರವಾದ ಕಾಯ್ದೆ ಕಾನೂನುಗಳನ್ನು ಅರಿತುಕೊಳ್ಳಬೇಕು. ಸಂಘ ಮತ್ತು ಮಹಾಸಂಘದ ಮಹಿಳೆಯರು ಈ ಕಾನೂನುಗಳ ಬಗ್ಗೆ ಚರ್ಚೆ ಮಾಡಿ ಇತರ ಮಹಿಳೆಯರಲ್ಲಿ ಜಾಗೃತಿ ಮೂಡಿಸಬೇಕು. ಮಹಿಳೆಯರಿಗೆ ಮಹಿಳೆಯರೇ ಅಭಯ ತೋರಬೇಕು” ಎಂದು ಹೇಳಿದರು.
ಸಂಸ್ಥೆಯ ಕಾರ್ಯಕರ್ತರಾದ ರಾಜೇಂದ್ರ ಚಿಕ್ಕೋಡಿ ಇವರು ಮಹಿಳಾ ಜಾಗೃತಿ ಗೀತೆ ಹಾಡಿದರು. ಸವೀತಾ ಕೋಳಿ ಸ್ವಾಗತಿಸಿದರು. ಸುನೀಲ್ ಗಸ್ತೆ ನಿರೂಪಿಸಿದರು ಮತ್ತು ಅನೀತಾ ವಾಡೇಕರ್ ವಂದಿಸಿದರು. ಈ ವೇಳೆ ಸಂಸ್ಥೆ ಕಾರ್ಯಕರ್ತರಾದ ಮೇರಿ ಸಿಸ್ಟರ್, ಸಿದ್ದಪ್ಪ, ಶೋಭಾ ಮತ್ತು ಮಲ್ಲಿಕಾರ್ಜುನ ಉಪಸ್ಥಿತರಿದ್ದರು.





