ಚಿಕ್ಕೋಡಿ :–
ವಾಯುವ್ಯ ಶಿಕ್ಷಕರ ಮತಕ್ಷೇತ್ರದ ವಿಧಾನ ಪರಿಷತ್ ಸದಸ್ಯರು ಹಾಗೂ ಕರ್ನಾಟಕ ಸರ್ಕಾರದ ನವದೆಹಲಿಯ ವಿಶೇಷ ಪ್ರತಿನಿಧಿಯಾಗಿರುವ ಪ್ರಕಾಶ ಹುಕ್ಕೇರಿ ಅವರು, ತಮ್ಮ ಮತಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಬೆಳಗಾವಿ ಜಿಲ್ಲೆಯ ವಿವಿಧ ಗ್ರಾಮ ಹಾಗೂ ಪಟ್ಟಣಗಳ ಶಾಲೆಗಳ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಹತ್ವದ ಆಡಳಿತಾತ್ಮಕ ಅನುದಾನ ಮಂಜೂರಾಗಿದೆ ಎಂದು ತಿಳಿಸಿದರು.
ಯಕ್ಸಂಬಾ ಪಟ್ಟಣದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳೀಯ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳಿಂದ ಬಂದ ಮನವಿಗಳನ್ನು ಪರಿಗಣಿಸಿ, ಸನ್ 2025–26ನೇ ಸಾಲಿನಲ್ಲಿ ಮತಕ್ಷೇತ್ರಕ್ಕೆ ನಿಗದಿಪಡಿಸಲಾದ ಪ್ರದೇಶಾಭಿವೃದ್ಧಿ ಮಂಡಳಿ ಅನುದಾನದಡಿ ಒಟ್ಟು 35 ಲಕ್ಷ ರೂಪಾಯಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಈ ಕಾಮಗಾರಿಗಳನ್ನು ಶೀಘ್ರದಲ್ಲೇ ಪ್ರಾರಂಭಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
“ಅನುಮೋದನೆ ಪಡೆದ ಕಾಮಗಾರಿಗಳ ವಿವರ ಹೀಗಿದೆ“
ಸವದತ್ತಿ ತಾಲೂಕಿನ ಶ್ರೀ ಶಿವಾನಂದ ಭಾರತಿ ಇಂಚಲ ಅನುದಾನಿತ ಸಂಸ್ಥೆಯ ಶ್ರೀ ಶಿವಯೋಗಿಶ್ವರ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗೆ ಶಾಲಾ ಕೊಠಡಿ ನಿರ್ಮಾಣಕ್ಕೆ 10 ಲಕ್ಷ ರೂ. ಮಂಜೂರು ಮಾಡಲಾಗಿದೆ.
ಬೈಲಹೊಂಗಲ ಪಟ್ಟಣದ ಶೂರ ಸಂಗೋಳ್ಳಿ ರಾಯಣ್ಣ ಬಾಲಕರ ಪ್ರೌಢ ಶಾಲೆಯ ಸುತ್ತ ಕಂಪೌಂಡ ಗೋಡೆ ನಿರ್ಮಾಣಕ್ಕೆ 10 ಲಕ್ಷ ರೂ. ಅನುದಾನ ಒದಗಿಸಲಾಗಿದೆ.
ಬೈಲಹೊಂಗಲ ಪಟ್ಟಣದ ಶ್ರೀ ಸಂತ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಅನುದಾನಿತ ಶ್ರೀ ಮರಡಿ ಬಸವೇಶ್ವರ ಪ್ರೌಢ ಶಾಲೆಗೆ ಈ ಹಿಂದೆ ಮಂಜೂರಾದ 5 ಲಕ್ಷ ರೂಪಾಯಿ ಅನುದಾನದ ಮುಂದುವರೆದ ಭಾಗವಾಗಿ, ವಿಜ್ಞಾನ ಪ್ರಯೋಗಾಲಯ ಕೊಠಡಿ ನಿರ್ಮಾಣಕ್ಕೆ ಮತ್ತೆ 5 ಲಕ್ಷ ರೂ. ಅನುದಾನ ಮಂಜೂರು ಮಾಡಲಾಗಿದೆ.
ಇನ್ನು ಬೆಳಗಾವಿ ತಾಲ್ಲೂಕಿನ ಶ್ರೀ ಕಲ್ಲೇಶ್ವರ ಶಿಕ್ಷಣ ಸಂಸ್ಥೆಯ ಮಣ್ಣೂರ ಪ್ರೌಢ ಶಾಲೆಗೆ ಕಂಪೌಂಡ ಗೋಡೆ ಹಾಗೂ ಶೌಚಾಲಯ ನಿರ್ಮಾಣಕ್ಕಾಗಿ 10 ಲಕ್ಷ ರೂ. ಅನುದಾನ ನೀಡಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಕಾಶ ಹುಕ್ಕೇರಿ ಅವರು, “ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳ ವಿದ್ಯಾರ್ಥಿಗಳಿಗೆ ಉತ್ತಮ ಹಾಗೂ ಸುರಕ್ಷಿತ ಶೈಕ್ಷಣಿಕ ವಾತಾವರಣ ಕಲ್ಪಿಸುವುದು ನನ್ನ ಮೊದಲ ಆದ್ಯತೆಯಾಗಿದೆ. ಶಾಲೆಗಳ ಮೂಲಭೂತ ಸೌಕರ್ಯಗಳನ್ನು ಬಲಪಡಿಸುವ ಮೂಲಕ ಗುಣಮಟ್ಟದ ಶಿಕ್ಷಣಕ್ಕೆ ಪೂರಕವಾದ ವ್ಯವಸ್ಥೆ ರೂಪಿಸುವ ಉದ್ದೇಶದಿಂದ ಈ ಅನುದಾನ ಮಂಜೂರು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಇನ್ನಷ್ಟು ಸಹಕಾರ ನೀಡಲಾಗುವುದು” ಎಂದು ಹೇಳಿದರು.





