ಚಿಕ್ಕೋಡಿ :–
“ಸಡಕ್ ಸುರಕ್ಷಾ – ಜೀವನ ರಕ್ಷಾ”
ಚಿಕ್ಕೋಡಿ ಪಟ್ಟಣದ ಪ್ರತಿಷ್ಠಿತ ಕೆ.ಎಲ್.ಇ ಸಂಸ್ಥೆಯ ಸಿ. ಬಿ. ಕೋರೆ ಪಾಲಿಟೆಕ್ನಿಕ್ ಸಭಾಭವನದಲ್ಲಿ
“ಸಡಕ್ ಸುರಕ್ಷಾ – ಜೀವನ ರಕ್ಷಾ” ಎಂಬ ಮಹತ್ವದ ವಿಷಯದ ಕುರಿತು ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿ (ಖಖಿಔ) ಗಳಾದ ಶ್ರೀ. ಮಂಜುನಾಥ ಶಿರಳಿ, ಶ್ರೀ ಎನ್. ವಿ. ಶಿರಗೌಂಕರ್, ಪ್ರಾಂಶುಪಾಲರು, ಆರ್. ಡಿ. ಕಾಲೇಜು, ಚಿಕ್ಕೋಡಿ ಹಾಗೂ ಶ್ರೀ. ಮಹೇಶ್ ಹನಮಶೆಟ್ಟಿ, ಮೋಟಾರ್ ವಾಹನ ನಿರೀಕ್ಷಕರು, ಚಿಕ್ಕೋಡಿ ಅವರು ಭಾಗವಹಿಸಿದ್ದರು. ಶ್ರೀ ಮಂಜುನಾಥ ಶಿರಳಿಯವರು ತಮ್ಮ ಅತಿಥಿ ಭಾಷಣದಲ್ಲಿ ಹೆಲ್ಮೆಟ್ ಧರಿಸಿ ವಿದ್ಯಾರ್ಥಿಗಳು ದ್ವಿಚಕ್ರವಾಹನವನ್ನು ಚಲಾಯಿಸಬೇಕು ಮತ್ತು ಶೀಟ್-ಬೆಲ್ಟ್ ಹಾಕಿ ಕಾರನ್ನು ಚಲಾಯಿಸಬೇಕು, ರಸ್ತೆ ನಿಯಮಗಳನ್ನು ಪಾಲಿಸಬೇಕು ಎಂದು ತಿಳಿಹೇಳಿದರು.

ಮತ್ತೋರ್ವ ಅತಿಥಿಗಳಾದ ಚಿಕ್ಕೋಡಿ ಆರ್.ಡಿ. ಕಾಲೇಜಿನ ಪ್ರಾಚಾರ್ಯರಾದ ಶ್ರೀ ಏನ್. ವಿ. ಶಿರಗೌಂಕರ್ ರವರು ತಮ್ಮ ಅತಿಥಿ ಭಾಷಣದಲ್ಲಿ ಕಾಡಿಗಿಂತ ನಾಡು, ನಾಡಿಗಿಂತ ರಸ್ತೆಗಳು ಸುರಕ್ಷಿತವಾಗಿಲ್ಲ ಏಕೆಂದರೆ ಹಲವಾರು ಯುವಕರು ತಮ್ಮ ಪ್ರಾಣವನ್ನು ರಸ್ತೆ ಅಪಘಾತಗಳಲ್ಲಿ ಕಳೆದುಕೊಳ್ಳುತ್ತಿದ್ದಾರೆ ಮತ್ತು ಮಕ್ಕಳ ಕೈಯಲ್ಲಿ ವಾಹನಗಳನ್ನು ಚಲಾಯಿಸಲು ಕೊಡಬಾರದು, ಇದು ತಂದೆ ತಾಯಂದಿರ ಜವಾಬ್ದಾರಿಯಾಗಿದೆ ಹಾಗೂ ವಾಹನ ಚಾಲಕರು ರಸ್ತೆ ನಿಯಮಗಳನ್ನು ಪಾಲಿಸುತ್ತಾ ಜವಾಬ್ದಾರಿಯುತವಾಗಿ ವಾಹನಗಳನ್ನು ಚಲಾಯಿಸಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಅವರು ರಸ್ತೆ ಸುರಕ್ಷತೆಯ ಮಹತ್ವ, ಸಂಚಾರ ನಿಯಮಗಳ ಪಾಲನೆ ಮತ್ತು ಅವಘಡಗಳನ್ನು ತಡೆಗಟ್ಟುವಲ್ಲಿ ಸಾರ್ವಜನಿಕರ ಜವಾಬ್ದಾರಿಯ ಕುರಿತು ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಎಲ್.ಇ. ಸೊಸೈಟಿಯ ಚಿದಾನಂದ ಬಿ. ಕೋರೆ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ವಿ. ಎ. ಖೋತ ಅವರು ವಹಿಸಿದ್ದರು. ಅಧ್ಯಕ್ಷೀಯ ಭಾಷಣದಲ್ಲಿ ಅವರು ರಸ್ತೆ ಸುರಕ್ಷತೆಯ ಅರಿವು ವಿದ್ಯಾರ್ಥಿ ಜೀವನದಲ್ಲಿಯೇ ಬೆಳೆಸಿಕೊಳ್ಳಬೇಕಾದ ಅಗತ್ಯವಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಪ್ರೊ. ಎಂ. ಬಿ. ನಾವಿ ಅವರು ಅತಿಥಿಗಳನ್ನು ಹಾಗೂ ಸಭಿಕರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಪ್ರೊ. ವರ್ಶಾ ಸದಲಗೆ ಅವರು ನೆರವೇರಿಸಿದರು.
ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು





